ವದಂತಿಗಳನ್ನು ಹರಡಿದ ಆರೋಪ: ತಮಿಳು ಯೂಟ್ಯೂಬರ್ ಫೆಲಿಕ್ಸ್ ಜೆರಾಲ್ಡ್ ಬಂಧನ
ಫೆಲಿಕ್ಸ್ ಜೆರಾಲ್ಡ್ | Photo Credit : X
ಚೆನ್ನೈ: ಕರೂರ್ ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿರುವ ಆರೋಪದ ಮೇಲೆ ತಮಿಳುನಾಡಿನ ಖ್ಯಾತ ಯೂಟ್ಯೂಬರ್ ಫೆಲಿಕ್ಸ್ ಜೆರಾಲ್ಡ್ ರನ್ನು ಮಂಗಳವಾರ ಬಂಧಿಸಲಾಗಿದೆ.
ಕಾಲ್ತುಳಿತ ಘಟನೆಯ ಬಗ್ಗೆ ವದಂತಿಗಳನ್ನು ಹರಡಲಾಗುತ್ತಿದೆ ಎಂಬ ಆರೋಪದ ಮೇಲೆ ಪೊಲೀಸರು 20 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಈ ಸಂಬಂಧ ಮೂವರನ್ನು ಬಂಧಿಸಿದ ಬೆನ್ನಿಗೇ ಈ ಬಂಧನ ನಡೆದಿದೆ.
ಜೆರಾಲ್ಡ್ ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತು ವಿಶ್ಲೇಷಣಾ ತುಣುಕುಗಳನ್ನು ಪ್ರಸಾರ ಮಾಡುತ್ತಾರೆ.
ಈ ನಡುವೆ, ಕಾಲ್ತುಳಿತ ಪ್ರಕರಣದ ಪ್ರಮುಖ ಆರೋಪಿಯಾದ ತಮಿಳಗ ವೆಟ್ರಿ ಕಳಗಂ ಪಕ್ಷದ ಪದಾಧಿಕಾರಿ ಮತಿಯಳಗನ್ ಗೆ ಆಶ್ರಯ ನೀಡಿದ ಆರೋಪದ ಮೇಲೆ ತಮಿಳಗ ವೆಟ್ರಿ ಕಳಗಂ ಪಕ್ಷದ ಪದಾಧಿಕಾರಿ ಪೌನ್ ರಾಜ್ ಎಂಬುವವರನ್ನು ವಿಶೇಷ ಪೊಲೀಸ್ ತಂಡ ಬಂಧಿಸಿದೆ. ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿರುವ ಮೂವರು ತಮಿಳಗ ವೆಟ್ರಿ ಕಳಗಂ ಪಕ್ಷದ ಪದಾಧಿಕಾರಿಗಳ ಪೈಕಿ ಮತಿಯಳಗನ್ ಕೂಡಾ ಒಬ್ಬರಾಗಿದ್ದಾರೆ.