×
Ad

ಕಳಪೆ ಹೆದ್ದಾರಿಯ ವಿರುದ್ಧ ಟ್ಯಾಂಕರ್ ಚಾಲಕರ ಪ್ರತಿಭಟನೆ: ಮಿಝೋರಾಂನಲ್ಲಿ ತೈಲ ಬಿಕ್ಕಟ್ಟು

Update: 2025-07-19 22:27 IST

ಸಾಂದರ್ಭಿಕ ಚಿತ್ರ

ಐಝ್ವಾಲ್: ರಾಷ್ಟ್ರೀಯ ಹೆದ್ದಾರಿಯ ಕಳಪೆ ಗುಣಮಟ್ಟವನ್ನು ಪ್ರತಿಭಟಿಸಿ ತೈಲ ಟ್ಯಾಂಕರ್ ಚಾಲಕರು ಶನಿವಾರ ಮುಷ್ಕರ ನಡೆಸಿದ್ದರಿಂದ, ಮಿಝೋರಾಂ ರಾಜ್ಯದಲ್ಲಿ ತೈಲ ಕೊರತೆ ಉದ್ಭವಿಸಿದೆ.

ಸಾಯಿರಂಗ್-ಕೌನ್ಪುಯಿ ವಿಭಾಗದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 6/306 ಯಾವ ರೀತಿ ಹದಗೆಟ್ಟಿದೆಯೆಂದರೆ, ತೈಲ ಟ್ಯಾಂಕರ್ ಗಳು ಈ ರಸ್ತೆಗಳಲ್ಲಿ ಪ್ರಯಾಣಿಸುವುದು ಸುರಕ್ಷಿತವಾಗಿ ಉಳಿದಿಲ್ಲ ಎಂದು ಮಿಝೋರಾಂ ತೈಲ ಟ್ಯಾಂಕರ್ ಚಾಲಕರ ಒಕ್ಕೂಟ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

ರಸ್ತೆಯನ್ನು ದುರಸ್ತಿಗೊಳಿಸಿ, ಟ್ರಕ್ ಗಳು ಪ್ರಯಾಣಿಸಲು ಸೂಕ್ತವನ್ನಾಗಿಸುವವರೆಗೂ ತೈಲ ಸಾಗಣೆ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಈ ಪ್ರಕಟನೆಯಲ್ಲಿ ಹೇಳಲಾಗಿದೆ.

ಈ ಅನಿರ್ದಿಷ್ಟಾವಧಿ ಮುಷ್ಕರದ ಸುದ್ದಿ ಹೊರ ಬೀಳುತ್ತಿದ್ದಂತೆಯೆ, ಮಿಝೋರಾಂನ ರಾಜಧಾನಿ ಐಝ್ವಾಲ್ ಹೊರಗಿನ ಬಹುತೇಕ ಇಂಧನ ಭರ್ತಿ ಕೇಂದ್ರಗಳೆದುರು ಭಾರಿ ಉದ್ದನೆಯ ಸರತಿ ಸಾಲು ಕಂಡು ಬಂದಿತು.

ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 306 ಮಿಝೋರಾಂನ ಜೀವನಾಡಿಯಾಗಿದ್ದು, ಅಸ್ಸಾಂನ ಸಿಲ್ಚಾರ್ ಪಟ್ಟಣದ ಮಾರ್ಗವಾಗಿ ಉಳಿದ ದೇಶದ ಭಾಗಗಳನ್ನು ರಾಜ್ಯದೊಂದಿಗೆ ಸಂಪರ್ಕಿಸುತ್ತದೆ. ತೈಲ ಸೇರಿದಂತೆ ಎಲ್ಲ ವಸ್ತುಗಳ ಸರಬರಾಜುಗಳೂ ಮಿಝೋರಾಂನ ಹೊರಗಿನಿಂದ ಈ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಬರುತ್ತವೆ. ಈ ಮಾರ್ಗದ ಒಂದು ಭಾಗವನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 6 ಎಂದು ಕರೆಯಲಾಗುತ್ತದೆ.

ಟ್ಯಾಂಕರ್ ಚಾಲಕರು ಮುಷ್ಕರ ನಿರತರಾಗಿರುವುದರಿಂದ, ರಾಜ್ಯವು ತೈಲ ಕೊರತೆಯನ್ನು ಎದುರಿಸುವ ಸಾಧ್ಯತೆ ಇದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ನಿರ್ದೇಶಕ ಸೈಝಿಕ್‌ಪುಯಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News