ಸ್ವದೇಶಿ ನಿರ್ಮಿತ ಸೆಮಿಕಂಡಕ್ಟರ್ ಗಳಿಂದ ನಡೆಯುವ ಪ್ರಪ್ರಥಮ ಟೆಲಿಕಾಂ ವ್ಯವಸ್ಥೆಗೆ ಟಿಇಸಿ ಪ್ರಮಾಣಪತ್ರ
ಅಶ್ವಿನಿ ವೈಷ್ಣವ್ | PTI
ಹೊಸದಿಲ್ಲಿ,ಸೆ.6: ಕೇವಲ ದೇಶಿ ನಿರ್ಮಿತ ಚಿಪ್ ಗಳನ್ನು ಬಳಸಿರುವ ಟೆಲಿಕಾಂ ವ್ಯವಸ್ಥೆಯೊಂದು ದೂರಸಂಪರ್ಕ ಎಂಜಿನಿಯರಿಂಗ್ ಕೇಂದ್ರ( ಟಿಇಸಿ)ದ ಪ್ರಮಾಣೀಕರಣವನ್ನು ಪಡೆದುಕೊಂಡಿದೆಯೆಂದು ಕೇಂದ್ರ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಶುಕ್ರವಾರ ಘೋಷಿಸಿದ್ದಾರೆ.
ಈ ಬೆಳವಣಿಗೆಯನ್ನು ಸಚಿವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಶ್ಲಾಘಿಸಿದ್ದು, ದೇಶದ ಸೆಮಿಕಂಡಕ್ಟರ್ ಕೈಗಾರಿಕೆಯಲ್ಲಿ ದೈತ್ಯ ಜಿಗಿತವೆಂದು ಬಣ್ಣಿಸಿದ್ದಾರೆ.
‘‘ಭಾರತದ ಸೆಮಿಕಂಡಕ್ಟರ್ ಯಶೋಗಾಥೆಯಲ್ಲಿ ಒಂದು ಮಹಾ ಜಿಗಿತವಾಗಿದೆ !. ಮೊದಲ ಬಾರಿಗೆ ‘ಮೇಡ್ ಇನ್ ಇಂಡಿಯಾ’ ಚಿಪ್‌ಗಳನ್ನು ಬಳಸಿಕೊಂಡ ಟೆಲಿಕಾಂ ವ್ಯವಸ್ಥೆಯೊಂದು ಪ್ರಮಾಣಿತ ಹಾಗೂ ಗುಣಮಟ್ಟದ ಪರೀಕ್ಷೆ ( ಟಿಇಸಿ ಪ್ರಮಾಣೀಕರಣ)ಗಳಲ್ಲಿ ಉತ್ತೀರ್ಣಗೊಂಡಿದೆ’’ ಎಂದು ಅಶ್ವಿನಿ ವೈಷ್ಣವ್ ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಟಿಇಸಿ ಪ್ರಮಾಣೀಕರಣವು, ಭಾರತೀಯ ದೂರಸಂಪರ್ಕ ಇಲಾಖೆಯ ಗುಣಮಟ್ಟದ ನಿರ್ಧಾರದ ಮಾನದಂಡವಾಗಿದೆ. ಟೆಲಿಕಾಂ ಉಪಕರಣವು ಕಟ್ಟುನಿಟ್ಟಿನ ಕಾರ್ಯನಿರ್ವಹಣೆ ಹಾಗೂ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿದೆ ಎಂಬುದನ್ನು ಖಾತರಿಪಡಿಸುತ್ತದೆ. ದೇಶದಲ್ಲಿ ಈ ಚಿಪ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಅನುಮೋದನೆ ದೊರೆತಿದೆ. ಇದರೊಂದಿಗೆ ಭಾರತ ಕೂಡಾ ಸೆಮಿಕಂಡಕ್ಟರ್ ಚಿ ತಯಾರಕ ರಾಷ್ಕಗಳ ಸಾಲಿಗೆ ೀ ಸೇರ್ಪಡೆಗೊಂಡಿದ್ದು, ರಫ್ತು ಅವಕಾಶಗಳನ್ನು ತೆರೆದಿಟ್ಟಿದೆ.
ಭಾರತದ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಇದೊಂದು ಮೈಲುಗಲ್ಲಿನ ಸಾಧನೆಯಾಗಿದೆ. ಇದರಿಂದಾಗಿ ಆಮದು ಸೆಮಿಕಂಡಕ್ಟರ್‌ಗಳ ಮೇಲಿನ ಭಾರತೀಯ ಅವಲಂಬನೆಯನ್ನು ಕಡಿಮೆಗೊಲಿಸಲಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
ಪ್ರಸಕ್ತ ತೈವಾನ್, ದಕ್ಷಿಣ ಕೊರಿಯ, ಜಪಾನ್, ಚೀನಾ ಹಾಗೂ ಅಮೆರಿಕ ಸೆಮಿಕಂಡಕ್ಟರ್ ಚಿಪ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ದೇಶಗಳಾಗಿವೆ.