ಜನಗಣತಿ ಪ್ರಕ್ರಿಯೆ ಈ ಬಾರಿ ಡಿಜಿಟಲ್: ಒಂಬತ್ತು ತಿಂಗಳೊಳಗೆ ಅಂಕಿ ಅಂಶ ಬಿಡುಗಡೆ
ಸಾಂದರ್ಭಿಕ ಚಿತ್ರ | PC : x/grok
ಹೊಸದಿಲ್ಲಿ: ಭಾರತದ 2027ರ ಜನಗಣತಿಯ ಅಂಕಿ ಅಂಶಗಳನ್ನು ಅದೇ ವರ್ಷದ ಕೊನೆಯ ತಿಂಗಳೊಳಗೆ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಇಡೀ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲು ನಿರ್ಧರಿಸಲಾಗಿದೆ. ಮುಂಬರುವ ಗಣತಿ ಕಾರ್ಯದಲ್ಲಿ ಮಾಹಿತಿ ಸಂಗ್ರಹ ಮತ್ತು ಅಂಕಿ ಅಂಶ ಸಂಸ್ಕರಣೆಗೆ ಡಿಜಿಟಲ್ ವಿಧಾನ ಬಳಕೆಯಾಗಲಿದೆ.
ಸರ್ಕಾರಿ ಮೂಲಗಳ ಹೇಳಿಕೆ ಪ್ರಕಾರ, 2011ರ ಜನಗಣತಿಗಿಂತ ಭಿನ್ನವಾಗಿ 2027ರ ಮಾರ್ಚ್ ತಿಂಗಳ ಒಳಗಾಗಿ ಗಣತಿ ಕಾರ್ಯವನ್ನು ಮುಗಿಸಿ ಒಂಬತ್ತು ತಿಂಗಳ ಒಳಗಾಗಿ ಅಂತಿಮ ಜನಗಣತಿ ಅಂಕಿ ಅಂಶ ಬಿಡುಗಡೆ ಮಾಡಲಾಗುತ್ತದೆ. ಹಿಂದೆ ರಾಷ್ಟ್ರಮಟ್ಟದ, ರಾಜ್ಯಮಟ್ಟದ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಲಿಂಗವಾರು ಅಂಕಿ ಅಂಶಗಳನ್ನು ಬಿಡುಗಡೆ ಮಾಡಲು ಹಲವು ವರ್ಷಗಳ ಅವಧಿ ಬೇಕಾಗುತ್ತಿತ್ತು.
ಮುಂಬರುವ ಜನಗಣತಿಯ ಉಲ್ಲೇಖಿತ ದಿನಾಂಕವನ್ನು 2027ರ ಮಾರ್ಚ್ 1 ಎಂದು ಸರ್ಕಾರ ಇತ್ತೀಚೆಗೆ ಪ್ರಕಟಿಸಿತ್ತು. ಇಡೀ ಪ್ರಕ್ರಿಯೆ 2020ರಲ್ಲಿ ಆರಂಭವಾಗಬೇಕಿತ್ತಾದರೂ, ಕೋವಿಡ್ ಸಾಂಕ್ರಾಮಿಕದಿಂದಾಗಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಗಣತಿ ಕಾರ್ಯವನ್ನು ಸರ್ಕಾರ ತಡೆಹಿಡಿದಿತ್ತು.
ಈ ಬಾರಿ 2027ರ ಗಣತಿ ಕಾರ್ಯವನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಮನೆಗಳನ್ನು ಪಟ್ಟಿ ಮಾಡುವ ಹಂತ 2026ರಲ್ಲಿ ನಡೆಯಲಿದ್ದು, ಜನಸಂಖ್ಯೆಯ ಗಣತಿ ಕಾರ್ಯ 2027ರ ಫೆಬ್ರವರಿಯಲ್ಲಿ ನಡೆಯುತ್ತದೆ.
ಮೊಟ್ಟಮೊದಲ ಬಾರಿಗೆ ಜನಗಣತಿ ಅಂಕಿ ಅಂಶವನ್ನು ಡಿಜಿಟಲ್ ವಿಧಾನದಲ್ಲಿ ಸಂಗ್ರಹಿಸಲಾಗುತ್ತಿದ್ದು, ಇದಕ್ಕಾಗಿ 16 ಭಾಷೆಗಳಲ್ಲಿ ಅಂದರೆ ಹಿಂದಿ, ಇಂಗ್ಲಿಷ್ ಮತ್ತ 14 ಪ್ರಾದೇಶಿಕ ಭಾಷೆಗಳಲ್ಲಿ ಮೊಬೈಲ್ ಆ್ಯಪ್‍ಗಳನ್ನು ಬಳಸಲಾಗುತ್ತದೆ. ಈ ಆ್ಯಪ್‍ಗಳನ್ನು ಅತ್ಯಂತ ಸರಳವಾಗಿ ವಿನ್ಯಾಸಗೊಳಿಸಿದ್ದು, ಗಣತಿಗಾರರಿಗೆ ಮತ್ತು ನಾಗರಿಕರಿಗೆ ಬಳಕೆದಾರ-ಸ್ನೇಹಿಯಾಗಲಿದೆ. ನಾಗರಿಕರಿಗೆ ಸ್ವಯಂ ಗಣತಿ ಆಯ್ಕೆ ಮಾಡಿಕೊಳ್ಳಲು ಕೂಡಾ ಅವಕಾಶವಿದೆ ಎಂದು ಮೂಲಗಳು ವಿವರಿಸಿವೆ.
ಈ ಕಾರಣದಿಂದ ಗಣತಿಕಾರರು ಭಾರವಾದ ಕಾಗದ, ದಾಖಲೆಗಳನ್ನು ಕ್ಷೇತ್ರಕಾರ್ಯಕ್ಕೆ ತೆರಳುವ ವೇಳೆ ಒಯ್ಯುವ ಅಗತ್ಯ ಇರುವುದಿಲ್ಲ.