×
Ad

ಅಂಬಾನಿ ಸಂಗೀತ್‌ ಕಾರ್ಯಕ್ರಮದಲ್ಲಿ ತೇಜಸ್ ಠಾಕ್ರೆ ಡ್ಯಾನ್ಸ್ | ವಿರೋಧಿಗಳಿಂದ ಗೇಲಿಗೊಳಗಾದ ಉದ್ಧವ್ ಠಾಕ್ರೆ ಪುತ್ರ

Update: 2024-07-09 22:41 IST

PC : X/@DonRanganna

ಮುಂಬೈ : ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವರ ಪ್ರೀ ವೆಡ್ಡಿಂಗ್‌ ಸಂಗೀತ್‌ ಕಾರ್ಯಕ್ರಮದಲ್ಲಿ ಹಾಡೊಂದಕ್ಕೆ ನೃತ್ಯ ಮಾಡುವ ಮೂಲಕ ಶಿವಸೇನೆ(ಉದ್ಧವ್ ಠಾಕ್ರೆ ಬಣ)ಯ ಮುಖ್ಯಸ್ಥ ಉದ್ಧವ್ ಠಾಕ್ರೆ ಪುತ್ರ ತೇಜಸ್ ಠಾಕ್ರೆ ತಮ್ಮ ರಾಜಕೀಯ ವಿರೋಧಿಗಳಿಂದ ಗೇಲಿಗೊಳಗಾಗಿದ್ದಾರೆ.

ಕಳೆದ ವಾರ ಮುಂಬೈನಲ್ಲಿ ಆಯೋಜಿಸಲಾಗಿದ್ದ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವರ ಪ್ರೀ ವೆಡ್ಡಿಂಗ್‌ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉದ್ದವ್ ಠಾಕ್ರೆಯ 29 ವರ್ಷದ ಪುತ್ರ ತೇಜಸ್ ಠಾಕ್ರೆ, "ಕಭಿ ಖುಷ್, ಕಭಿ ಘಮ್" ಚಿತ್ರದ ಗೀತೆಗೆ ಬಾಲಿವುಡ್ ತಾರೆಯರಾದ ಸಾರಾ ಅಲಿ ಖಾನ್, ಜಾನ್ವಿ ಕಪೂರ್, ಅನನ್ಯ ಪಾಂಡೆ ಹಾಗೂ ಇನ್ನಿತರರೊಂದಿಗೆ ಹೆಜ್ಜೆ ಹಾಕಿದ್ದರು. ಆದರೆ, ತೇಜಸ್ ಠಾಕ್ರೆಯ ಈ ನೃತ್ಯಕ್ಕೆ ಮೆಚ್ಚುಗೆಗಳು ಹರಿದು ಬರುವ ಬದಲು, ರಾಜಕೀಯ ವಿರೋಧಿಗಳಿಂದ ಗೇಲಿಗೊಳಗಾಗಿದೆ. ಇದರಿಂದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ತೇಜಸ್ ಠಾಕ್ರೆ ಇಬ್ಬರೂ ತೀವ್ರ ಮುಜುಗರಕ್ಕೀಡಾಗಿದ್ದಾರೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮುಂಬೈ ಬಿಜೆಪಿ ಘಟಕದ ಅಧ್ಯಕ್ಷ ಆಶಿಶ್ ಶೆಲಾರ್, "ತೇಜಸ್ ಠಾಕ್ರೆ ಯಾವತ್ತೂ ದಹಿ ಹಂಡಿ ಸಂಭ್ರಮಾಚರಣೆಯಲ್ಲಿ "ಗೋವಿಂದಾ ರೇ ಗೋಪಾಲ" ಗೀತೆಗಾಗಲಿ ಅಥವಾ ಗಣೇಶೋತ್ಸವ ಹಬ್ಬದಲ್ಲಾಗಲಿ ಹೆಜ್ಜೆ ಹಾಕಿರಲಿಲ್ಲ. ಆದರೆ, ಮಹಾರಾಷ್ಟ್ರದ ಈ ಸ್ಫುರದ್ರೂಪಿ ಯುವಕನು ಅಂಬಾನಿ ವಿವಾಹೋತ್ಸವದಲ್ಲಿ ಕೊನೆಯ ಸಾಲಿನಲ್ಲಿ ನೃತ್ಯ ಮಾಡುತ್ತಿದ್ದ” ಎಂದು ವ್ಯಂಗ್ಯವಾಡಿದ್ದಾರೆ.

ಆಶಿಶ್ ಶೆಲಾರ್‌ರ ಸಹೋದ್ಯೋಗಿ ಹಾಗೂ ಮಾಜಿ ಕೇಂದ್ರ ಸಚಿವ ನಾರಾಯಣ ರಾಣೆ ಅವರ ಪುತ್ರ ನಿತೇಶ್ ರಾಣೆ, "ಒಂದು ಕಡೆ ಗುಜರಾತಿಗಳ ಮೇಲೆ ದಾಳಿ ನಡೆಸುವುದು, ಮತ್ತೊಂದೆಡೆ ಅಂಬಾನಿ ವಿವಾಹೋತ್ಸವದಲ್ಲಿ ನೃತ್ಯ ಮಾಡುವುದು" ಎಂದು ಕುಟುಕಿದ್ದಾರೆ.

ಶಿಂದೆ ಶಿವಸೇನೆ ಬಣದ ನಾಯಕರಾದ ಶೀತಲ್ ಮಾತ್ರೆ ಕೂಡಾ ಈ ಕುರಿತು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದು, "ಅಂಬಾನಿ ವಿವಾಹೋತ್ಸವದ ಹಿನ್ನೆಲೆ ನೃತ್ಯಗಾರ ಚಿರಪರಿಚಿತನಂತೆ ಕಾಣುತ್ತಿದ್ದಾನೆ. ಆತನ ತಂದೆಯು ವ್ಯಂಗ್ಯವಾಡುವುದರಲ್ಲಿ ಎತ್ತಿದ ಕೈ. ಮಗ ನೃತ್ಯ ತಾರೆಯಾಗಿದ್ದಾನೆ" ಎಂದು ಕಟಕಿಯಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News