×
Ad

ತೆಲಂಗಾಣ | ಒಂದೇ ತಿಂಗಳಲ್ಲಿ 900 ಬೀದಿನಾಯಿಗಳ ಹತ್ಯೆ

ಸಾಮೂಹಿಕ ಹತ್ಯೆ ಆರೋಪ: ಜಗ್ತಿಯಾಲ್ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಶ್ವಾನಗಳ ಕಳೇಬರ ಪತ್ತೆ

Update: 2026-01-24 08:07 IST

ಹೈದರಾಬಾದ್: ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ಹೊಂಡವೊಂದರಲ್ಲಿ 300ಕ್ಕೂ ಹೆಚ್ಚು ಶ್ವಾನಗಳ ಕಳೇಬರ ಪತ್ತೆಯಾಗಿದ್ದು, ಬೀದಿನಾಯಿಗಳ ಸಾಮೂಹಿಕ ಹತ್ಯೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ 900ಕ್ಕೂ ಹೆಚ್ಚು ಬೀದಿನಾಯಿಗಳನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.

ರಾಜಧಾನಿ ಹೈದರಾಬಾದ್‌ನಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಪೆಗದಪಲ್ಲಿ ಗ್ರಾಮದಲ್ಲಿ ಗುರುವಾರ ಈ ಕೃತ್ಯ ಬೆಳಕಿಗೆ ಬಂದಿದೆ. ಗ್ರಾಮಪಂಚಾಯತ್ ಸರಪಂಚರ ಆದೇಶದ ಮೇರೆಗೆ ಹತ್ಯೆ ನಡೆಸಲಾಗಿದೆ ಎಂದು ಪ್ರಾಣಿ ಹಕ್ಕುಗಳ ಹೋರಾಟಗಾರರು ಆರೋಪಿಸಿದ್ದಾರೆ.

ಭಾರತದ ಬಿಡಾಡಿ ಪ್ರಾಣಿಗಳ ಪ್ರತಿಷ್ಠಾನದ ಪ್ರೀತಿ ಮುದವಂತ್ ನೀಡಿದ ದೂರಿನ ಆಧಾರದಲ್ಲಿ, ಗ್ರಾಮಪಂಚಾಯತ್ ಸರಪಂಚರು ಹಾಗೂ ಕಾರ್ಯದರ್ಶಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 325 ಮತ್ತು 3(5), ಹಾಗೂ ಪ್ರಾಣಿಗಳ ವಿರುದ್ಧದ ಕ್ರೌರ್ಯ ತಡೆ ಕಾಯ್ದೆ–1960ರ ಸೆಕ್ಷನ್ 11(1)(ಎ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಗ್ರಾಮಸ್ಥರ ಹೇಳಿಕೆಯ ಪ್ರಕಾರ, ಇಬ್ಬರು ಮಹಿಳೆಯರು ವಿಷಪೂರಿತ ಚುಚ್ಚುಮದ್ದು ನೀಡುವ ಮೂಲಕ ಬೀದಿನಾಯಿಗಳನ್ನು ಹತ್ಯೆ ಮಾಡಿದ್ದಾರೆ ಎಂದು ಪ್ರೀತಿ ಮುದವಂತ್ ಆರೋಪಿಸಿದ್ದಾರೆ. ಇದಕ್ಕೂ ಮೊದಲು ಕಾಮರೆಡ್ಡಿ, ಹನುಮಕೊಂಡ ಹಾಗೂ ರಂಗಾರೆಡ್ಡಿ ಜಿಲ್ಲೆಗಳಲ್ಲಿ ಕಳೆದ ಕೆಲ ವಾರಗಳ ಹಿಂದೆ 600ಕ್ಕೂ ಹೆಚ್ಚು ಶ್ವಾನಗಳನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News