ಮೀಸಲಾತಿ ಪ್ರತಿಭಟನೆ: ತೆಲಂಗಾಣ ಬಂದ್, ಅಂಗಡಿಗಳು, ಪೆಟ್ರೋಲ್ ಪಂಪ್ ಗೆ ದಾಳಿ
ಸಾಂದರ್ಭಿಕ ಚಿತ್ರ | Photo Credit : PTI
ಹೈದರಾಬಾದ್, ಅ.18: ಹಿಂದುಳಿದ ವರ್ಗಗಳ ಸಂಘಟನೆಗಳು ಕರೆ ನೀಡಿದ್ದ ಮತ್ತು ಪ್ರಮುಖ ರಾಜಕೀಯ ಪಕ್ಷಗಳು ಬೆಂಬಲಿಸಿದ್ದ ಬಂದ್ ನಿಂದಾಗಿ ತೆಲಂಗಾಣದಾದ್ಯಂತ ಶನಿವಾರ ಸಾಮಾನ್ಯ ಜನಜೀವನವು ಸ್ತಬ್ಧಗೊಂಡಿತ್ತು. ಅಂಗಡಿ-ಮುಂಗಟ್ಟುಗಳು,ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿದ್ದು,ಸಾರ್ವಜನಿಕ ಸಾರಿಗೆ ಸ್ಥಗಿತಗೊಂಡಿತ್ತು.
ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ.42 ಮೀಸಲಾತಿ ಕಲ್ಪಿಸಿ ಸರಕಾರವು ಹೊರಡಿಸಿದ್ದ ಆದೇಶಕ್ಕೆ ಉಚ್ಚ ನ್ಯಾಯಾಲಯವು ಇತ್ತೀಚಿಗೆ ತಡೆಯಾಜ್ಞೆಯನ್ನು ನೀಡಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆದಿದೆ. ಹೈಕೋರ್ಟ್ ನ ಆದೇಶದಲ್ಲಿ ಮಧ್ಯಪ್ರವೇಶಿಸಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದೆ.
ಹಿಂದುಳಿದ ವರ್ಗಗಳ ಜಂಟಿ ಕ್ರಿಯಾ ಸಮಿತಿಯು ಕರೆ ನೀಡಿದ್ದ ಬಂದ್ ಅನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷ,ಪ್ರತಿಪಕ್ಷಗಳಾದ ಬಿಆರ್ಎಸ್ ಮತ್ತು ಬಿಜೆಪಿ ಬೆಂಬಲಿಸಿದ್ದವು. ಸಚಿವರು ಸೇರಿದಂತೆ ಪಟ್ಟಣಗಳು ಮತ್ತು ಪ್ರಮುಖ ನಗರಗಳಾದ್ಯಂತ ಭಾರೀ ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು.
ಹೈದರಾಬಾದ್ ನಲ್ಲಿ ಪ್ರತಿಭಟನೆ ಸಂದರ್ಭದಲ್ಲಿ ಕೆಲವರು ಪೆಟ್ರೋಲ್ ಪಂಪ್ ಮೇಲೆ ದಾಳಿ ನಡೆಸಿ ಹಾನಿಯನ್ನುಂಟು ಮಾಡಿದ್ದಾರೆ. ಸಮೀಪದಲ್ಲಿಯ ಅಂಗಡಿಗಳೂ ಪ್ರತಿಭಟನಾಕಾರರ ಆಕ್ರೋಶಕ್ಕೆ ಗುರಿಯಾಗಿದ್ದವು.
ರಾಜಕೀಯ ನಾಯಕರು ಮತ್ತು ಕಾರ್ಮಿಕ ಒಕ್ಕೂಟಗಳಿಂದ ಮನವಿಗಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ತೆಲಂಗಾಣ ರಸ್ತೆ ಸಾರಿಗೆ ನಿಗಮದ ಬಸ್ಗಳು ರಸ್ತೆಗಿಳಿದಿರಲಿಲ್ಲ. ಪ್ರಯಾಣಿಕರು, ವಿಶೇಷವಾಗಿ ದೀಪಾವಳಿಗೆ ತಮ್ಮ ಊರುಗಳಿಗೆ ತೆರಳಲು ಸಜ್ಜಾಗಿದ್ದವರು ಬಸ್ ನಿಲ್ದಾಣಗಳಲ್ಲಿ ಮತ್ತು ಜಂಕ್ಷನ್ಗಳಲ್ಲಿ ಅತಂತ್ರರಾಗಿದ್ದರು.