ತೆಲಂಗಾಣ ಪೊಲೀಸರಿಂದ ಗುಜರಾತ್ ನ 20 ಸೈಬರ್ ವಂಚಕರ ಬಂಧನ
ಹೈದರಾಬಾದ್: ಸೈಬರ್ ಅಪರಾಧದ ಮೇಲೆ ಮಹತ್ವದ ದಾಳಿ ನಡೆಸಿರುವ ತೆಲಂಗಾಣ ಸೈಬರ್ ಸುರಕ್ಷತಾ ದಳವು, ತನ್ನ ಯಶಸ್ವಿ ವಿಶೇಷ ಅಂತಾರಾಜ್ಯ ಕಾರ್ಯಾಚರಣೆಯಲ್ಲಿ ತೆಲಂಗಾಣದಲ್ಲಿ 60 ಸೈಬರ್ ಅಪರಾಧ ಪ್ರಕರಣಗಳು ಸೇರಿದಂತೆ ದೇಶಾದ್ಯಂತ ಬೃಹತ್ ಪ್ರಮಾಣದ 615 ಪ್ರಕರಣಗಳಲ್ಲಿ ಭಾಗಿಯಾಗಿದ್ದ 20 ಮಂದಿ ಸೈಬರ್ ವಂಚಕರನ್ನು ಗುಜರಾತ್‌ನ ಸೂರತ್‌ನಿಂದ ಬಂಧಿಸಿದೆ.
10 ದಿನಗಳ ಕಾಲ ಸೂರತ್‌ನಲ್ಲೇ ಠಿಕಾಣಿಯೂರಿದ್ದ ಈ ಸೈಬರ್ ವಂಚನೆ ಪ್ರಕರಣಗಳ ತನಿಖೆಗೆಂದೇ ರಚಿಸಲಾಗಿದ್ದ ತೆಲಂಗಾಣ ಸೈಬರ್ ಅಪರಾಧ ಸುರಕ್ಷತಾ ದಳದ ತಂಡಗಳು, ಸೈಬರ್ ಅಪರಾಧದೆಡೆಗಿನ ಶೂನ್ಯ ಸಹಿಷ್ಣುತೆ ನೀತಿಯಡಿ ಈ ಕಾರ್ಯಾಚರಣೆಯನ್ನು ಅನುಷ್ಠಾನಗೊಳಿಸಿದವು. ತೆಲಂಗಾಣ ಸೈಬರ್ ಅಪರಾಧ ಸುರಕ್ಷತಾ ದಳದ ಕಾರ್ಯಾಚರಣೆ ಘಟಕವು ಸೈಬರ್ ಅಪರಾಧಿಗಳನ್ನು ಸೆರೆ ಹಿಡಿದಿರುವ ಐದನೆಯ ಮಹತ್ವದ ಕಾರ್ಯಾಚರಣೆ ಇದಾಗಿದೆ ಎಂದು ತೆಲಂಗಾಣ ಸೈಬರ್ ಅಪರಾಧ ಸುರಕ್ಷತಾ ದಳದ ನಿರ್ದೇಶಕಿ ಶಿಖಾ ಗೋಯೆಲ್ ತಿಳಿಸಿದ್ದಾರೆ.
ಅಂತಾರಾಜ್ಯ ಸೈಬರ್ ಅಪರಾಧ ತನಿಖೆಗಳಿಗೆ ಕೇಂದ್ರೀಕೃತ ದತ್ತಾಂಶ ಚಾಲಿತ ಹಾಗೂ ವ್ಯೂಹಾತ್ಮಕ ಧೋರಣೆಯನ್ನು ಜಾರಿಗೊಳಿಸಲು ಸ್ಥಾಪಿಸಲಾಗಿರುವ ಕಾರ್ಯಾಚರಣೆ ಘಟಕವು ತೆಲಂಗಾಣದಿಂದ ವರದಿಯಾಗಿದ್ದ ಏಳು ಸಿಸಿಪಿಎಸ್ ಪ್ರಕರಣಗಳತ್ತ ತನ್ನ ಗಮನ ಕೇಂದ್ರೀಕರಿಸಿತ್ತು. ಈ ಪ್ರಕರಣಗಳು ಚೆಕ್ ಮೂಲಕ ಮಾಡಲಾಗಿರುವ ವಹಿವಾಟುಗಳು ಒಳಗೊಂಡಿದ್ದವು.
ಇದರ ಫಲವಾಗಿ, ತೆಲಂಗಾಣ ಸೈಬರ್ ಅಪರಾಧ ಸುರಕ್ಷತಾ ದಳದ ಕಾರ್ಯಾಚರಣೆ ಘಟಕದ ತಂಡಗಳು 14 ಮಂದಿ ನಿಷ್ಕ್ರೀಯ ಬ್ಯಾಂಕ್ ಖಾತೆದಾರರು ಹಾಗೂ ಆರು ಏಜೆಂಟ್‌ಗಳನ್ನು ಬಂಧಿಸಿವೆ. ಪ್ರಾಥಮಿಕ ತನಿಖೆಯ ಪ್ರಕಾರ, ಈ ಆರೋಪಿಗಳು 4.37 ಕೋಟಿ ಮೊತ್ತದ ಸಂಶಯಾಸ್ಪದ ವಹಿವಾಟುಗಳನ್ನು 27 ನಿಷ್ಕ್ರೀಯ ಬ್ಯಾಂಕ್ ಖಾತೆಗಳ ಮೂಲಕ ನಿರ್ವಹಿಸಿರುವುದು ಬೆಳಕಿಗೆ ಬಂದಿದೆ. ತೆಲಂಗಾಣ ಒಂದರಲ್ಲೇ ಐವರು ಆರೋಪಿಗಳು ಚೆಕ್‌ಗಳ ಮೂಲಕ 22,64,500 ರೂ. ಅನ್ನು ಈ ಖಾತೆಗಳಿಂದ ಹಿಂಪಡೆದಿರುವುದೂ ಬಯಲಾಗಿದೆ.
ಈ ಆರೋಪಿಗಳಲ್ಲಿ ಖಾಸಗಿ ಉದ್ಯೋಗಿಗಳು, ಉದ್ಯಮಿಗಳು ಹಾಗೂ ಡಿಸಿಬಿ ಬ್ಯಾಂಕ್ ನ ವಾಪಿ ಶಾಖೆಯ ಓರ್ವ ವ್ಯವಸ್ಥಾಪಕ ಸೇರಿದ್ದಾರೆ. ಈ ಆರೋಪಿಗಳು ವ್ಯಾಪಾರ ಹಾಗೂ ಅರೆಕಾಲಿಕ ಉದ್ಯೋಗ ವಂಚನೆಗಳು ಸೇರಿದಂತೆ ಹಲವು ಸೈಬರ್ ವಂಚನೆಗಳಲ್ಲಿ ಭಾಗಿಯಾಗಿದ್ದಾರೆ.
ಈ ಆರೋಪಿಗಳನ್ನು ವರ್ಗಾವಣೆ ವಾರಂಟ್ ಅಡಿ ತೆಲಂಗಾಣಕ್ಕೆ ಕರೆತರಲಾಗಿದ್ದು, ಸದ್ಯ ರಾಜ್ಯಾದ್ಯಂತ ಇರುವ ವಿವಿಧ ಜೈಲುಗಳಲ್ಲಿರಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನೂ ಹಲವು ಶಂಕಿತ ಆರೋಪಿಗಳನ್ನು ಸೆರೆ ಹಿಡಿಯಲು ತನಿಖೆ ಪ್ರಗತಿಯಲ್ಲಿದೆ.