×
Ad

ಪ್ರತಿಪಕ್ಷಗಳ ವಿರೋಧದ ನಡುವೆಯೂ ತೆಲಂಗಾಣ ಸರಕಾರದಿಂದ ಎರಡನೇ ಸುತ್ತಿನ ಜಾತಿ ಸಮೀಕ್ಷೆ

Update: 2025-02-13 20:09 IST

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ (PTI)

ಹೈದರಾಬಾದ್: ತನ್ನ ಜಾತಿ ಸಮೀಕ್ಷೆಯ ಎರಡನೇ ಸುತ್ತನ್ನು ಫೆಬ್ರವರಿ 16ರಿಂದ 28ರ ವರೆಗೆ ನಡೆಸಲಾಗುವುದು ಎಂದು ತೆಲಂಗಾಣ ಸರಕಾರ ಬುಧವಾರ ಹೇಳಿದೆ.

ನವೆಂಬರ್ ಹಾಗೂ ಡಿಸೆಂಬರ್ನಲ್ಲಿ ನಡೆದ ಮೊದಲ ಸುತ್ತಿನಲ್ಲಿ ಭಾಗಿಯಾಗದ ಶೇ. 3.1 ಜನಸಂಖ್ಯೆಯ ಜಾತಿ ಸಮೀಕ್ಷೆ ಎರಡನೇ ಸುತ್ತಿನಲ್ಲಿ ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಮಲ್ಲು ಅವರು ತಿಳಿಸಿದ್ದಾರೆ.

ಎರಡನೇ ಸುತ್ತಿನಲ್ಲಿ ತಮ್ಮ ದತ್ತಾಂಶವನ್ನು ಪರಿಷ್ಕರಿಸುವಂತೆ ಕೂಡ ನಾಗರಿಕರು ಕೋರಿದ್ದಾರೆ ಎಂದು ಅವರು ಹೇಳಿದ್ದಾರೆ. ಸರಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಶೇ. 42 ಮೀಸಲಾತಿ ನೀಡುವ ಸರಕಾರದ ಬದ್ಧತೆಯನ್ನು ಅವರು ಪುನರುಚ್ಛರಿಸಿದ್ದಾರೆ.

ಜಾತಿ ಸಮೀಕ್ಷೆಯನ್ನು ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಫೆಬ್ರವರಿ 4ರಂದು ವಿಧಾನ ಸಭೆಯಲ್ಲಿ ಮಂಡಿಸಿದ್ದರು. ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಮರು ಒಳಗೊಂಡಂತೆ ಶೇ. 56.33 ಹಿಂದುಳಿದ ವರ್ಗದವರು ಎಂಬುದನ್ನು ಸಮೀಕ್ಷೆ ತೋರಿಸಿತ್ತು. ಮುಸ್ಲಿಮರನ್ನು ಹೊರತುಪಡಿಸಿ ಹಿಂದುಳಿದ ವರ್ಗದವರ ಪಾಲು ಶೇ. 46.25 ಎಂದು ಸಮೀಕ್ಷೆ ಹೇಳಿತ್ತು.

ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಯ ಶೇ. 17.4 ಅಥವಾ 61.8 ಲಕ್ಷ ಜನರಿದ್ದಾರೆ. ಪರಿಶಿಷ್ಟ ಪಂಗಡದ ಶೇ. 10.4 ಅಥವಾ 37 ಲಕ್ಷ ಜನರಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಜಾತಿ ಸಮೀಕ್ಷೆಯ ಫಲಿತಾಂಶವನ್ನು ರಾಜ್ಯದ ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ಹಾಗೂ ಬಿಆರ್ಎಸ್ ತೀವ್ರವಾಗಿ ಟೀಕಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News