×
Ad

ತೆಲಂಗಾಣ ಸುರಂಗ ಕುಸಿತ: ರಕ್ಷಣಾ ಕಾರ್ಯಾಚರಣೆಗೆ ಕೇರಳ ಶ್ವಾ ನದಳದ ನೆರವು

Update: 2025-03-10 21:37 IST

ಹೈದರಾಬಾದ್: ಕಳೆದ 17 ದಿನಗಳಿಂದ 15 ವಿವಿಧ ಸಂಸ್ಥೆಗಳನ್ನೊಳಗೊಂಡ ರಕ್ಷಣಾ ತಂಡಗಳು ದಣಿವರಿಯದೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರೂ, ತೆಲಂಗಾಣದ ಶ್ರೀಶೈಲಂ ಎಡ ದಂಡೆ ಕಾಲುವೆ ಸುರಂಗದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರನ್ನು ಪತ್ತೆ ಹಚ್ಚುವ ರಕ್ಷಣಾ ಕಾರ್ಯಾಚರಣೆಯಲ್ಲಿ ಕೇರಳದಿಂದ ರವಾನಿಸಲಾಗಿರುವ ವಿಶೇಷ ತರಬೇತಿ ಪಡೆದ ಮನುಷ್ಯರನ್ನು ಪತ್ತೆ ಹಚ್ಚುವ ಶ್ವಾ ನಗಳು ಮಹತ್ವದ ಪಾತ್ರ ವಹಿಸಿವೆ ಎಂದು ವರದಿಯಾಗಿದೆ.

ಕೇರಳ ಪೊಲೀಸ್ ಇಲಾಖೆಯ ಕೆ-9 ದಳಕ್ಕೆ ಸೇರಿರುವ ಮಾಯಾ ಹಾಗೂ ಮರ್ಫಿ ಎಂಬ ಶ್ವಾನಗಳು ಹೂಳು ಹಾಗೂ ಮಣ್ಣಿನಡಿ ಹೂತು ಹೋಗಿದ್ದ ಮೃತದೇಹವಿರುವ ನಿಖರ ಸ್ಥಳವನ್ನು ಗುರುತಿಸಿವೆ. ನಂತರ, ರ್ಯಾಟ್ ಮೈನರ್ ಗಳು ಹಾಗೂ ಇನ್ನಿತರ ರಕ್ಷಣಾ ಸಿಬ್ಬಂದಿಗಳು ಆ ಸ್ಥಳವನ್ನು ಅಗೆದಿದ್ದು, ರವಿವಾರ ಟಿಬಿಎಂ ಆಪರೇಟರ್ ಆದ ಪಂಜಾಬ್ ನಿವಾಸಿ ಗುರುಪ್ರೀತ್ ಸಿಂಗ್ ನ ಮೃತ ದೇಹವನ್ನು ವಶಪಡಿಸಿಕೊಂಡಿದ್ದಾರೆ.

ತಮ್ಮ ಅದ್ಭುತ ಶೋಧ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿರುವ ಈ ಬೆಲ್ಜಿಯಂ ಮಲಿನೊಯಿಸ್ ಶ್ವಾನಗಳು ಉಳಿದ ಮೃತ ದೇಹಗಳನ್ನು ಪತ್ತೆ ಹಚ್ಚಿರುವ ಸ್ಥಳದ ಸಮೀಪ ನೆಲ ಅಗೆಯುವ ಕೆಲಸ ಮುಂದುವರಿದಿದೆ. ಮನುಷ್ಯರ ಮೃತ ದೇಹಗಳನ್ನು ಪತ್ತೆ ಹಚ್ಚುವ ಶ್ವಾನಗಳು ಎಂದೂ ಕರೆಯಲಾಗುವ ಮಾಯಾ ಹಾಗೂ ಮರ್ಫಿ ಶ್ವಾನಗಳು ಎರ್ನಾಕುಲಂ ಪೊಲೀಸ್ ಘಟಕಕ್ಕೆ ಸೇರಿದ್ದು, ಅವಕ್ಕೆ ತ್ರಿಶೂರ್ ಅಕಾಡೆಮಿಯಲ್ಲಿ ತರಬೇತಿ ನೀಡಲಾಗಿದೆ ಎಂದು ರಕ್ಷಣಾ ತಂಡಗಳು ತಿಳಿಸಿವೆ ಎಂದು Deccan Herald ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕೊಳೆತು ಹೋಗಿರುವ ಮೃತ ದೇಹಗಳ ವಾಸನೆಯನ್ನು ಹಿಡಿದು, ಅವು ಹೂತು ಹೋಗಿವೆಯೊ ಅಥವಾ ಮುಳುಗಿ ಹೋಗಿವೆಯೊ ಎಂಬುದನ್ನು ಪತ್ತೆ ಹಚ್ಚುವ ವಿಶೇಷ ತರಬೇತಿಯನ್ನು ಈ ಶ್ವಾನಗಳಿಗೆ ನೀಡಲಾಗಿದೆ. ಮಾಯಾ ಹಾಗೂ ಮರ್ಫಿ ಶ್ವಾ ನಗಳು ಕಳೆದ ಐದು ವರ್ಷಗಳಿಂದ ಕೇರಳ ಪೊಲೀಸ್ ಇಲಾಖೆಗಾಗಿ ಸೇವೆ ಸಲ್ಲಿಸುತ್ತಿದ್ದು, 200ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದ ವಯನಾಡ್ ಭೂಕುಸಿತ ಸೇರಿದಂತೆ ಹಲವಾರು ಪ್ರಮುಖ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ.

ಸುರಂಗದಲ್ಲಿನ ಅಸ್ಥಿರ ಪರಿಸ್ಥಿತಿಯಿಂದಾಗಿ, ಈ ಶ್ವಾ ನಗಳು ಗುರುತಿಸಿರುವ ಎರಡನೆ ಸ್ಥಳವು ನೆಲ ಅಗಿತಕ್ಕೆ ಸವಾಲಾಗಿ ಪರಿಣಮಿಸಿದೆ. ಲೋಹದ ಅವಶೇಷಗಳು, ಕೆಸರು ಹಾಗೂ ಆಮ್ಲಜನಕದ ಕೊರತೆಯು ರಕ್ಷಣಾ ಕಾರ್ಯಾಚರಣೆಯನ್ನು ತೀರಾ ಕ್ಲಿಷ್ಟವಾಗಿಸಿವೆ. ನೆಲ ಅಗಿತದ ಪ್ರಕ್ರಿಯೆಯಲ್ಲಿ ನೆರವು ನೀಡಲು ಸುಧಾರಿತ ರೊಬೊಟಿಕ್ ತಂತ್ರಜ್ಞಾನವನ್ನೂ ರಕ್ಷಣಾ ತಂಡಗಳು ನಿಯೋಜಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News