ಥೈಲ್ಯಾಂಡ್- ಕಾಂಬೋಡಿಯ ನಡುವೆ ಉದ್ವಿಗ್ನ : ಸಂಘರ್ಷ ಪೀಡಿತ ಪ್ರಾಂತ್ಯಗಳಿಗೆ ತೆರಳದಂತೆ ಭಾರತೀಯರಿಗೆ ರಾಯಭಾರಿ ಕಚೇರಿ ಸಲಹೆ
Photo credit: PTI
ಬ್ಯಾಂಕಾಕ್ : ಥೈಲ್ಯಾಂಡ್ ಮತ್ತು ಕಾಂಬೋಡಿಯ ಪಡೆಗಳ ನಡುವಿನ ಸಂಘರ್ಷದ ಹಿನ್ನೆಲೆ ಭಾರತ ಥೈಲ್ಯಾಂಡ್‌ನಲ್ಲಿರುವ ಭಾರತೀಯರಿಗೆ ಎಚ್ಚರಿಕೆ ನೀಡಿದ್ದು, ಥೈಲ್ಯಾಂಡ್‌ನಲ್ಲಿನ ಏಳು ಪ್ರಾಂತ್ಯಗಳ ಕೆಲ ಸ್ಥಳಗಳಿಗೆ ಪ್ರಯಾಣಿಸುವುದನ್ನು ತಪ್ಪಿಸಿ ಎಂದು ಸಲಹೆ ನೀಡಿದೆ.
ಥೈಲ್ಯಾಂಡ್-ಕಾಂಬೋಡಿಯಾ ಗಡಿ ಸಮೀಪದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ರಾಯಭಾರಿ ಕಚೇರಿಯು ಎಲ್ಲಾ ಭಾರತೀಯ ಪ್ರಯಾಣಿಕರನ್ನು ಸಂಘರ್ಷ ಪೀಡಿತ ಸ್ಥಳಗಳಿಗೆ ಭೇಟಿ ನೀಡದಂತೆ ಸೂಚಿಸಿದೆ.
ಥೈಲ್ಯಾಂಡ್ ಪ್ರವಾಸೋದ್ಯಮ ಪ್ರಾಧಿಕಾರದ ನಿರ್ದೇಶನದಂತೆ ಕೆಲ ಪ್ರವಾಸಿ ತಾಣಗಳಿಗೆ ಸಧ್ಯದ ಪರಿಸ್ಥಿತಿಯಲ್ಲಿ ತೆರಳಬಾರದು ಎಂದು ಏಳು ಪ್ರಾಂತ್ಯಗಳಲ್ಲಿನ ಕೆಲವು ಸ್ಥಳಗಳಿಗೆ ಭೇಟಿ ನೀಡದಂತೆ ಪ್ರಯಾಣಿಕರಿಗೆ ಸೂಚಿಸುವ ಥೈಲ್ಯಾಂಡ್ ಪ್ರವಾಸೋದ್ಯಮ ಪ್ರಾಧಿಕಾರದ (TAT )ಪೋಸ್ಟ್ ಅನ್ನು ರಾಯಭಾರಿ ಕಚೇರಿ ಹಂಚಿಕೊಂಡಿದೆ.
ಥೈಲ್ಯಾಂಡ್ ಮತ್ತು ಕಾಂಬೋಡಿಯನ್ ಪಡೆಗಳ ನಡುವಿನ ಸಂಘರ್ಷ ಗುರುವಾರ ಮತ್ತೆ ಆರಂಭವಾಗಿದೆ. ವರದಿಗಳ ಪ್ರಕಾರ ಈಗಾಗಲೇ 16 ಜನರು ಮೃತಪಟ್ಟಿದ್ದಾರೆ ಮತ್ತು ಸಾವಿರಾರು ಜನರನ್ನು ಗಡಿಯ ಎರಡೂ ಪ್ರದೇಶಗಳಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.