ಜಾರ್ಖಂಡ್ | ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆ ಬಳಿಕ ಥಲಸ್ಸೆಮಿಯಾ ಪೀಡಿತ ಐವರು ಮಕ್ಕಳಲ್ಲಿ ಎಚ್ಐವಿ ಸೋಂಕು ಪತ್ತೆ
ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ ಆರೋಗ್ಯ ಇಲಾಖೆ
ಸಾಂದರ್ಭಿಕ ಚಿತ್ರ (Image by h9images on Freepik)
ರಾಂಚಿ : ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಚೈಬಾಸಾದಲ್ಲಿನ ಸದರ್ ಆಸ್ಪತ್ರೆಯಲ್ಲಿ ರಕ್ತ ನೀಡಿದ ನಂತರ ಕನಿಷ್ಠ ಐವರು ಥಲಸ್ಸೆಮಿಯಾ ರೋಗ ಪೀಡಿತ ಮಕ್ಕಳಲ್ಲಿ ಎಚ್ಐವಿ ಪಾಸಿಟಿವ್ ಕಂಡು ಬಂದಿದೆ. ಈ ಕುರಿತು ರಾಜ್ಯ ಆರೋಗ್ಯ ಇಲಾಖೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.
ಸೆಪ್ಟೆಂಬರ್ 13 ರಂದು ಥಲಸ್ಸೆಮಿಯಾ ಪೀಡಿತ ಓರ್ವ ಬಾಲಕನಿಗೆ ರಕ್ತ ನೀಡಲಾಗಿತ್ತು. ಅಕ್ಟೋಬರ್ 18ರಂದು ಪರೀಕ್ಷೆಯ ಸಮಯದಲ್ಲಿ ಎಚ್ಐವಿ ಪಾಸಿಟಿವ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಬಳಿಕ ಬಾಲಕನ ತಂದೆ ರಕ್ತ ನಿಧಿ ಕೇಂದ್ರದ ಸಿಬ್ಬಂದಿಗಳ ವಿರುದ್ಧ ನಿರ್ಲಕ್ಷ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಾಧ್ಯಮ ವರದಿಗಳ ನಂತರ ಜಾರ್ಖಂಡ್ ಹೈಕೋರ್ಟ್ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದೆ.
ಡಾ. ದಿನೇಶ್ ಕುಮಾರ್ ನೇತೃತ್ವದ ಜಾರ್ಖಂಡ್ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ(ಜೆಎಸ್ಎಸಿಎಸ್) ತಂಡವು ಅಕ್ಟೋಬರ್ 25ರಂದು ಚೈಬಾಸಾಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಮತ್ತೆ ನಾಲ್ವರು ಮಕ್ಕಳಲ್ಲಿ ಎಚ್ಐವಿ ಪಾಸಿಟಿವ್ ಇರುವುದು ಕಂಡು ಬಂದಿದೆ. ಇದರಿಂದ ಎಚ್ಐವಿ ಸೋಂಕಿತ ಒಟ್ಟು ಮಕ್ಕಳ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
"ಥಲಸ್ಸೆಮಿಯಾ ರೋಗ ಪೀಡಿತ ಮಕ್ಕಳು ವರ್ಷಗಳಿಂದ ಪ್ರತಿ 15 ರಿಂದ 30 ದಿನಗಳಿಗೊಮ್ಮೆ ರಕ್ತ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ಪರೀಕ್ಷೆ ಮಾಡಿದಾಗ ಐವರು ಮಕ್ಕಳಲ್ಲಿ ಎಚ್ಐವಿ ಪಾಸಿಟಿವ್ ಪತ್ತೆಯಾಗಿದೆ . ಈ ಕುರಿತು ಪರಿಶೀಲನೆಯನ್ನು ನಡೆಸುತ್ತಿದ್ದೇವೆ" ಎಂದು ಜಿಲ್ಲಾಧಿಕಾರಿ ಚಂದನ್ ಕುಮಾರ್ ಹೇಳಿದ್ದಾರೆ.