ಥಾರ್ ಮರುಭೂಮಿಯಲ್ಲಿ 20 ವರ್ಷಗಳಿಂದ ಅಧಿಕ ಮಳೆ!
PC: shutterstock.com
ಹೊಸದಿಲ್ಲಿ: ದೇಶದಲ್ಲೇ ಅತೀ ಕಡಿಮೆ ಮಳೆ ಬೀಳುವ 36 ಉಪವಿಭಾಗಗಳ ಪೈಕಿ 2 ಉಪವಿಭಾಗಗಳನ್ನು ಹೊಂದಿದ ಪಶ್ಚಿಮ ರಾಜಸ್ಥಾನ ಪ್ರದೇಶ ಹಾಗೂ ಭಾರತದ ಅತಿದೊಡ್ಡ ಮರುಭೂಮಿ ಎನಿಸಿದ ಥಾರ್ ಮರುಭೂಮಿಯಲ್ಲಿ ಪ್ರಸಕ್ತ ಮುಂಗಾರಿನಲ್ಲಿ ಅಧಿಕ ಮಳೆ ಬಿದ್ದಿದೆ. ಕುತೂಹಲದ ಅಂಶವೆಂದರೆ ಇದು ಅಸಾಮಾನ್ಯ ಸಂಗತಿಯೇನಲ್ಲ. ಕಳೆದ ಎರಡು ದಶಕಗಳಿಂದ ಈ ಪ್ರದೇಶ ವಾಡಿಕೆಗಿಂತ ಹೆಚ್ಚು ಮಳೆ ಪಡೆಯುತ್ತಿದ್ದು, ತಾಪಮಾನ ಹೆಚ್ಚುತ್ತಿರುವ ಜಗತ್ತಿನಲ್ಲಿ ಮಳೆ ಪ್ರವೃತ್ತಿ ಬದಲಾವಣೆಯ ಸೂಚಕ ಇದಾಗಿದೆ.
ಭಾರತದ ಹವಾಮಾನ ಇಲಾಖೆಯ ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದು ಬರುವಂತೆ ಕಳೆದ ಆರು ಮುಂಗಾರು ಮಳೆ ಅವಧಿಯಲ್ಲಿ ಈ ಭಾಗದಲ್ಲಿ ಸತತವಾಗಿ ವಾಡಿಕೆಗಿಂತ ಅಧಿಕ ಮಳೆ ಬಿದ್ದಿದೆ. ಕಳೆದ 20 ವರ್ಷಗಳಲ್ಲಿ, ಜೂನ್-ಸೆಪ್ಟೆಂಬರ್ ಅವಧಿಯಲ್ಲಿ 12 ವರ್ಷಗಳ ಕಾಲ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಐದು ವರ್ಷಗಳಲ್ಲಿ ವಾಡಿಕೆ ಮಳೆಯಾಗಿದ್ದು, ಮೂರು ವರ್ಷ ಮಾತ್ರ ಮಳೆ ಅಭಾವ ಉಂಟಾಗಿದೆ. 2005-24ರ ಅವಧಿಯಲ್ಲಿ ವಾಡಿಕೆಗಿಂತ ಶೇಕಡ 19ರಷ್ಟು ಅಧಿಕ ಮಳೆ ಬಿದ್ದಿರುವುದು ಈ ವಿಶ್ಲೇಷಣೆಯಿಂದ ತಿಳಿದು ಬರುತ್ತದೆ.
ಈ ವಿಶಿಷ್ಟ ಮಳೆ ಪ್ರವೃತ್ತಿಯನ್ನು ಇತರ ಎರಡು ಉಪವಿಭಾಗಗಳಾದ ಪಂಜಾಬ್ ಮತ್ತು ಹರ್ಯಾಣಾದಲ್ಲಿ ಬಿದ್ದ ಮಳೆ ಪ್ರಮಾಣಕ್ಕೆ ಹೋಲಿಸಿದರೆ ಇದರಲ್ಲಿ ಏನು ವಿಶೇಷ ಎನ್ನುವುದು ದೃಢಪಡುತ್ತದೆ. ಪಂಜಾಬ್ ನಲ್ಲಿ 20 ವರ್ಷಗಳಲ್ಲಿ ಒಂದು ಬಾರಿ ಮಾತ್ರ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. 12 ಬಾರಿ ವಾಡಿಕೆಯ ಮಳೆ ಹಾಗೂ ಏಳು ಬಾರಿ ವಾಡಿಕೆಗಿಂತ ಶೇಕಡ 20ರಷ್ಟು ಅಥವಾ ಅದಕ್ಕೂ ಅಧಿಕ ಪ್ರಮಾಣದಲ್ಲಿ ಮಳೆ ಅಭಾವ ಕಂಡುಬಂದಿದೆ. ಒಟ್ಟಾರೆಯಾಗಿ ಈ ಅವಧಿಯಲ್ಲಿ ವಾಡಿಕೆಗಿಂತ ಶೇಕಡ 13.5ರಷ್ಟು ಕಡಿಮೆ ಮಳೆಯಾಗಿದೆ.
ಹರ್ಯಾಣದಲ್ಲಿ ಕೂಡಾ ಪಂಜಾಬ್ ನ ಸ್ಥಿತಿಯೇ ಇದೆ. 2005ರ ಬಳಿಕ ಕೇವಲ ಮೂರು ವರ್ಷಗಳಲ್ಲಿ ಮಾತ್ರ ವಾಡಿಕೆಗಿಂತ ಅಧಿಕ ಮಳೆ ಬಿದ್ದಿದೆ. ಎಂಟು ವರ್ಷಗಳಲ್ಲಿ ವಾಡಿಕೆ ಮಳೆಯಾಗಿದ್ದರೆ, ಉಳಿದ ವರ್ಷಗಳಲ್ಲಿ ಮಳೆ ಅಭಾವ ಸ್ಥಿತಿ ಇದೆ. 20 ವರ್ಷಗಳ ಅವಧಿಯಲ್ಲಿ ಒಟ್ಟಾರೆಯಾಗಿ ವಾಡಿಕೆಗಿಂತ ಶೇಕಡ 13.3ರಷ್ಟು ಕಡಿಮೆ ಮಳೆ ಬಿದ್ದಿದೆ. ದೇಶಾದ್ಯಂತ ಈ ಅವಧಿಯಲ್ಲಿ ಶೇಕಡ 1.5ರಷ್ಟು ಮಾತ್ರ ಕಡಿಮೆ ಮಳೆಯಾಗಿದೆ.