×
Ad

ವರದಕ್ಷಿಣೆಯಾಗಿ ಕಾರು ಸಿಗದ ಹಿನ್ನೆಲೆ; ಮಹಿಳೆಗೆ ಬೆಂಕಿ ಹಚ್ಚಲು ಯತ್ನ

Update: 2023-07-15 08:14 IST

ಗೋರಖ್ ಪುರ: ವರದಕ್ಷಿಣೆಯ ಭಾಗವಾಗಿ ಕಾರು ಸಿಕ್ಕಿಲ್ಲ ಎಂಬ ಸಿಟ್ಟಿನಿಂದ ಗಂಡನ ಮನೆಯವರು ತನಗೆ ಬೆಂಕಿ ಹಚ್ಚಿ ಕೊಲ್ಲುವ ಪ್ರಯತ್ನ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿರುವ ಬಗ್ಗೆ ವರದಿಯಾಗಿದೆ.

ಹರೈಯಾ ಪೊಲೀಸ್ ಠಾಣೆ ವ್ಯಾಪ್ತಿಯ ದೇವರಿ ಎಂಬ ಗ್ರಾಮದ ವೀರೇಂದ್ರ ಶುಕ್ಲಾ ಎಂಬಾತನ ಜೊತೆ ಶಶಿ ಮಿಶ್ರಾ ಎಂಬಾಕೆಯ ವಿವಾಹ 2015ರಲ್ಲಿ ನಡೆದಿತ್ತು. ಮದುವೆಯ ವೇಳೆ ತಂದೆ ಏಳೂವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣ ಹಾಗೂ ನಗದನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದರು, ಆದರೂ ಕಾರು ನೀಡುವಂತೆ ಒತ್ತಾಯಿಸಿ ಪತಿ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಹಲವು ಬಾರಿ ಮಹಿಳೆಗೆ ಊಟವೂ ನೀಡದೇ ಚಿತ್ರಹಿಂಸೆ ನೀಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಮಧ್ಯೆ 2016ರಲ್ಲಿ ದಂಪತಿಗೆ ಜನಿಸಿದ ಮಗು ಅಪೌಷ್ಟಿಕತೆಯಿಂದಾಗಿ ಮೃತಪಟ್ಟಿದೆ ಎನ್ನಲಾಗಿದೆ. 2023ರ ಜೂನ್ 6ರಂದು ಭಾವಂದಿರು ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಹೇಗೋ ತಪ್ಪಿಸಿಕೊಂಡರೂ, ಅಟ್ಟಿಸಿಕೊಂಡು ಬಂದು ಮನೆಯಿಂದ ಹೊರಹಾಕಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕಳೆದ ವರ್ಷ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ರಾಜ್ಯಸಭೆಯಲ್ಲಿ ನೀಡಿದ್ದ ಹೇಳಿಕೆಯ ಪ್ರಕಾರ 2017 ರಿಂದ 2021ರ ಅವಧಿಯಲ್ಲಿ ದೇಶದಲ್ಲಿ 35493 ವರದಕ್ಷಿಣೆ ಸಾವಿನ ಪ್ರಕರಣಗಳು ದಾಖಲಾಗಿವೆ. ಅಂದರೆ ಪ್ರತಿದಿನ 20 ವರದಕ್ಷಿಣೆ ಸಾವು ಸಂಭವಿಸುತ್ತಿದ್ದು, ಉತ್ತರ ಪ್ರದೇಶದಲ್ಲಿ ಗರಿಷ್ಠ ಅಂದರೆ ಪ್ರತಿದಿನ ಆರು ಮಂದಿ ವರದಕ್ಷಿಣೆಗೆ ಬಲಿಯಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News