×
Ad

ಉಕ್ಕು ಆಮದು ಮೇಲೆ ಶೇ.12ರಷ್ಟು ಸುರಕ್ಷತಾ ಸುಂಕ ವಿಧಿಸಿದ ಕೇಂದ್ರ ಸರಕಾರ

Update: 2025-04-22 11:55 IST

ನವದೆಹಲಿ: ದೇಶೀಯ ಉಕ್ಕು ಉದ್ಯಮದ ಹಿತರಕ್ಷಣೆ ನಿಟ್ಟಿನಲ್ಲಿ ಕೇಂದ್ರ ಸರಕಾರ ರಕ್ಷಣಾತ್ಮಕ ಕ್ರಮ ಕೈಗೊಂಡಿದ್ದು, ಉಕ್ಕು ಆಮದಿನ ಮೇಲೆ ಕೇಂದ್ರವು ಶೇ.12ರಷ್ಟು ಸುರಕ್ಷತಾ ಸುಂಕವನ್ನು ವಿಧಿಸಿದೆ.

ಮಿಶ್ರಲೋಹವಲ್ಲದ ಮತ್ತು ಮಿಶ್ರಲೋಹದ ಉಕ್ಕಿನಿಂದ ತಯಾರಿಸಿದ ಕೆಲವು ಉತ್ಪನ್ನಗಳ ಆಮದಿನ ಮೇಲೆ ಶೇ.12ರಷ್ಟು ಸುರಕ್ಷತಾ ಸುಂಕ ವಿಧಿಸುವ ನಿರ್ಧಾರವನ್ನು ಸೋಮವಾರ ಕೈಗೊಂಡಿದೆ. ಇದಕ್ಕೆ ಸಂಬಂಧಿಸಿ ಕೇಂದ್ರವು ಅಧಿಸೂಚನೆಯನ್ನು ಹೊರಡಿಸಿದೆ.

ಈ ನಿಟ್ಟಿನಲ್ಲಿ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಈ ನಿರ್ಧಾರವನ್ನು ಸ್ವಾಗತಿಸಿದ್ದು, ಈ ಉಪಕ್ರಮವು ದೇಶೀಯ ಉಕ್ಕು ಉದ್ಯಮಕ್ಕೆ ಪ್ರೋತ್ಸಾಹದ ಜತೆಗೆ ಮತ್ತಷ್ಟು ಶಕ್ತಿ ತುಂಬಲಿದೆ ಎಂದು ಹೇಳಿದ್ದಾರೆ.

ಆಮದು ಹೆಚ್ಚಳದ ಪ್ರತಿಕೂಲಕರ ಪರಿಣಾಮಗಳಿಂದ ದೇಶೀಯ ಉಕ್ಕು ತಯಾರಕರನ್ನು ರಕ್ಷಿಸಲು ಮತ್ತು ಮಾರುಕಟ್ಟೆಯಲ್ಲಿ ನ್ಯಾಯಯುತ ಸ್ಪರ್ಧೆಯನ್ನು ಖಾತ್ರಿಪಡಿಸಿಕೊಳ್ಳಲು ಈ ಕ್ರಮವು ಸಕಾಲಿಕ ಮತ್ತು ಅಗತ್ಯ ಕ್ರಮವಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

"ಈ ಕ್ರಮವು ದೇಶೀಯ ಉತ್ಪಾದಕರಿಗೆ, ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉಕ್ಕು ಉದ್ಯಮಗಳಿಗೆ ಅನುಕೂಲವಾಗಿದೆ ಹಾಗೂ ಹೆಚ್ಚುತ್ತಿರುವ ಆಮದುಗಳಿಂದ ಅಪಾರ ಒತ್ತಡವನ್ನು ಎದುರಿಸುತ್ತಿರುವವರಿಗೆ ನಿರ್ಣಾಯಕ ಪರಿಹಾರವನ್ನು ನೀಡುತ್ತದೆ. ಸುರಕ್ಷತಾ ಸುಂಕವು ಮಾರುಕಟ್ಟೆ ಸ್ಥಿರತೆಯನ್ನು ಸ್ಥಾಪಿಸಲು ಮತ್ತು ದೇಶೀಯ ಉದ್ಯಮದ ವಿಶ್ವಾಸವನ್ನು ಬಲಪಡಿಸಲು ಸಹಾಯ ಮಾಡುತ್ತದೆ" ಎಂದು ಕೇಂದ್ರ ಸಚಿವರು ಪ್ರತಿಪಾದಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಆತ್ಮ ನಿರ್ಭರ ಭಾರತ್ ಪರಿಕಲ್ಪನೆಯ ಅಡಿಯಲ್ಲಿ ದೇಶೀಯ ವ್ಯೂಹಾತ್ಮಕ ವಲಯಗಳನ್ನು ಬಲಪಡಿಸುವಲ್ಲಿ ಇದು ಅತ್ಯುತ್ತಮ ಹೆಜ್ಜೆಯಾಗಿದೆ. ಅಲ್ಲದೆ, ಈ ನಿಟ್ಟಿನಲ್ಲಿ ಮೋದಿ ಅವರ ನಿರಂತರ ಬೆಂಬಲಕ್ಕಾಗಿ ನಾನು ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ಪ್ರಧಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಭಾರತೀಯ ಉಕ್ಕು ವಲಯವು ಸುಸ್ಥಿರ, ಸ್ವಾವಲಂಬಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿರುವುದನ್ನು ಖಚಿತಪಡಿಸಿಕೊಳ್ಳಲು ದೇಶೀಯ ವಲಯದಲ್ಲಿ ಸಚಿವಾಲಯವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ, ಮುಂದೆಯೂ ನಿರ್ಣಾಯಕ ಹೆಜ್ಜೆಗಳನ್ನು ಇಡುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News