ದಿಢೀರ್ ರಾಜಿನಾಮೆಗೂ ಮುನ್ನ ನೂತನ ಅರಣ್ಯ ನಿಯಮಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದ ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ
ಹರ್ಷ್ ಚೌಹಾಣ್ , ಭೂಪೇಂದ್ರ ಯಾದವ್ | Photo: newslaundry.com
ಹೊಸದಿಲ್ಲಿ: ಕಳೆದ ಎರಡು ವರ್ಷಗಳಲ್ಲಿ ಜೂನ್ 2022 ಹಾಗೂ ಡಿಸೆಂಬರ್ 2023ರಲ್ಲಿ ಅರಣ್ಯ ಸಂರಕ್ಷಣಾ ನಿಯಮಗಳು ಹಾಗೂ ಅರಣ್ಯ ಸಂರಕ್ಷಣಾ ಕಾಯ್ದೆಗೆ ಕೇಂದ್ರ ಪರಿಸರ ಸಚಿವಾಲಯವು ತಿದ್ದುಪಡಿ ಮಾಡಿದೆ. ಈ ಎರಡೂ ನಡೆಗಳು ಅರಣ್ಯ ಭೂಮಿಯನ್ನು ಕಾರ್ಪೊರೇಟ್ ಹಿತಾಸಕ್ತಿಗೆ ಪೂರಕವಾಗಿ ಸುಲಭವಾಗಿ ದೊರೆಯುವಂತೆ ಮಾಡುತ್ತದೆ. ಆ ಮೂಲಕ ಅರಣ್ಯವಾಸಿ ಸಮುದಾಯಗಳ ಹಕ್ಕುಗಳನ್ನು ಮೊಟಕುಗೊಳಿಸುತ್ತದೆ ಎಂಬ ವ್ಯಾಪಕ ಟೀಕೆಗೆ ಗುರಿಯಾಗಿದ್ದವು.
ಆದರೆ, ಸಾಂವಿಧಾನಿಕ ಪರಿಶಿಷ್ಟ ಪಂಗಡಗಳ ಆಯೋಗದ ಮುಖ್ಯಸ್ಥರು ತಿದ್ದುಪಡಿ ಮಾಡಲಾದ ನಿಯಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದಾಗ, ಅವರ ಕಳವಳವನ್ನು ಯಾವುದೇ ಚರ್ಚೆ ಇಲ್ಲದೆ ತಳ್ಳಿ ಹಾಕಲಾಯಿತು ಹಾಗೂ ನಂತರ ಅವರು ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿದರು.
ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಹರ್ಷ್ ಚೌಹಾಣ್ ಅಧ್ಯಕ್ಷರಾಗಿದ್ದರು. ಮಾಹಿತಿ ಹಕ್ಕು ಕಾಯ್ದೆಯಡಿ ಪಡೆಯಲಾಗಿರುವ ದಾಖಲೆಗಳ ಪ್ರಕಾರ, ನೂತನ ಅರಣ್ಯ ಸಂರಕ್ಷಣಾ ನಿಯಮಗಳ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿ ಅವರು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರಿಗೆ ಪತ್ರ ಬರೆದಿದ್ದರು.
ನೂತನ ಅರಣ್ಯ ಸಂರಕ್ಷಣಾ ನಿಯಮಗಳು ಪ್ರಮುಖ ಅವಕಾಶಗಳನ್ನು ತಿಳಿಗೊಳಿಸಿ ಮತ್ತು ನಿರ್ಲಕ್ಷಿಸುವ ಮೂಲಕ ದೊಡ್ಡ ಮಟ್ಟದ ಚಾರಿತ್ರಿಕ ಅನ್ಯಾಯ ಮಾಡುತ್ತವೆ. ಇದರೊಂದಿಗೆ ಅರಣ್ಯ ಹಕ್ಕು ಕಾಯ್ದೆಯ ಬಹು ಮುಖ್ಯ ಉದ್ದೇಶದೊಂದಿಗೆ ರಾಜಿ ಮಾಡಿಕೊಂಡಂತಾಗುತ್ತದೆ. ಇದು ಅತ್ಯಂತ ಕಳವಳಕಾರಿ ಸಂಗತಿ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಈ ತಿದ್ದುಪಡಿಗಳ ಕುರಿತು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗವನ್ನು ಸಂಪರ್ಕಿಸದೇ ಇರುವುದರಿಂದ ಪರಿಶಿಷ್ಟ ವರ್ಗದ ಜನರು ಹಾಗೂ ಇನ್ನಿತರ ಸಾಂಪ್ರದಾಯಿಕ ಅರಣ್ಯವಾಸಿ ಜನರ ಬದುಕು ಹಾಗೂ ಅರಣ್ಯ ಹಕ್ಕುಗಳ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗುತ್ತದೆ ಎಂದೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ತಮ್ಮ ಪತ್ರದ ಕೊನೆಯಲ್ಲಿ, ನೂತನ ತಿದ್ದುಪಡಿಗಳನ್ನು ಕೂಡಲೇ ತಡೆ ಹಿಡಿಯಬೇಕು ಹಾಗೂ ಅರಣ್ಯ ಸಂರಕ್ಷಣಾ ನಿಯಮಗಳಿಗೆ ಭವಿಷ್ಯದಲ್ಲಿ ತರಲಿರುವ ತಿದ್ದುಪಡಿಗಳಿಗೂ ಮುಂಚೆ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗವನ್ನು ಸಂಪರ್ಕಿಸಬೇಕು ಎಂದು ಚೌಹಾಣ್ ಆಗ್ರಹಿಸಿದ್ದಾರೆ.
ಈ ಪತ್ರಕ್ಕೆ ಪ್ರತಿಯಾಗಿ, ನವೆಂಬರ್ 2022ರಲ್ಲಿ ಪರಿಸರ ಸಚಿವ ಯಾದವ್ ಅವರು ಚೌಹಾಣ್ ಅವರಿಗೆ ಮರು ಪತ್ರ ಬರೆದಿದ್ದಾರೆ. ಮಾಹಿತಿ ಹಕ್ಕು ದಾಖಲೆಗಳ ಪ್ರಕಾರ, ಅರಣ್ಯ ಸಂರಕ್ಷಣಾ ನಿಯಮಗಳಿಗೆ ತಂದಿರುವ ತಿದ್ದುಪಡಿಗಳು ಅರಣ್ಯ ಹಕ್ಕುಗಳ ಕಾಯ್ದೆಯ ಮೇಲೆ ಸವಾರಿ ಮಾಡುವುದಿಲ್ಲ ಎಂದಷ್ಟೇ ಅವರು ಹೇಳಿದ್ದಾರೆ. ಇಂತಹ ಕೇವಲ ಒಂದು ಕಂಡಿಕೆಯ ಪ್ರತಿಕ್ರಿಯೆ ಮೂಲಕ ಚೌಹಾಣ್ ರ ಕಳವಳವನ್ನು ತಳ್ಳಿ ಹಾಕಲಾಗಿದೆ.
ಆದರೆ, ಈ ವಿಷಯವು ಇಲ್ಲಿಗೇ ನಿಲ್ಲುವುದಿಲ್ಲ. ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದಂಥ ಮಹತ್ವದ ಸಾಂವಿಧಾನಿಕ ಸಂಸ್ಥೆಯು ಇಂತಹ ವಿಷಯದ ಕುರಿತು ವ್ಯಕ್ತಪಡಿಸಿರುವ ಕಳವಳವು ಅಧಿಕಾರಸ್ಥರಿಗೆ ರುಚಿಸಿರುವಂತೆ ಕಂಡು ಬಂದಿಲ್ಲ. ಹೀಗಾಗಿ, ಜೂನ್ 2023ರಂದು ತಮ್ಮ ಅಧಿಕಾರಾವಧಿ ಇನ್ನೂ ಎಂಟು ತಿಂಗಳಿರುವಾಗಲೇ ಚೌಹಾಣ್ ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ಅರಣ್ಯ ಸಂರಕ್ಷಣಾ ನಿಯಮಗಳ ಕುರಿತು ಪರಿಸರ ಸಚಿವಾಲಯದಲ್ಲಿ ತರಾತುರಿ ಪ್ರಕ್ರಿಯೆಗಳು ನಡೆದಿದ್ದವು ಎಂಬುದರತ್ತ ಮಾಧ್ಯಮ ವರದಿಗಳು ಬೊಟ್ಟು ಮಾಡಿದ್ದವು. ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, “ಚೌಹಾಣ್ ತಮ್ಮ ಬದ್ಧತೆ ಹಾಗೂ ಧೈರ್ಯಕ್ಕೆ ಬೆಲೆ ತೆತ್ತರು” ಎಂದು ಹೇಳಿದ್ದರು.
ಸರಿಪಡಿಸುವಿಕೆಗೆ ಆಗ್ರಹಿಸಿದ್ದ ಅಧ್ಯಕ್ಷರು :
ಈ ಮುಂಚಿನ ಅರಣ್ಯ ಸಂರಕ್ಷಣಾ ನಿಯಮಗಳು ಅರಣ್ಯ ಹಕ್ಕುಗಳ ಕಾಯ್ದೆಯಡಿ ಮಾನ್ಯತೆ ಪಡೆದಿರುವ ಸ್ಥಳೀಯ ಸಮುದಾಯಗಳ ಭೂ ಹಕ್ಕನ್ನು ಕಡ್ಡಾಯಗೊಳಿಸಿದ್ದವು ಹಾಗೂ ಅರಣ್ಯ ಭೂಮಿಯನ್ನು ವರ್ಗಾವಣೆಗೆ ಅಂತಿಮ ಅನುಮೋದನೆ ನೀಡುವುದಕ್ಕೂ ಮುನ್ನ, ಗ್ರಾಮ ಸಭೆಯ ಮೂಲಕ ಅಲ್ಲಿನ ಸಮುದಾಯಗಳ ಸಮ್ಮತಿಯನ್ನು ಪಡೆಯಬೇಕಿತ್ತು. ಅರಣ್ಯ ಹಕ್ಕುಗಳನ್ನು ಖಾತರಿಪಡಿಸುವುದು ಕೇಂದ್ರ ಸರ್ಕಾರದ ಪ್ರಾಥಮಿಕ ಹೊಣೆಗಾರಿಕೆಯಾಗಿದ್ದು, ವರ್ಗಾವಣೆ ಪ್ರಸ್ತಾವನೆಗಳಿಗೆ ಸಮ್ಮತಿ ಪಡೆಯಬೇಕಾಗುತ್ತದೆ.
ಈ ಅಗತ್ಯತೆಯನ್ನು ನೂತನ ತಿದ್ದುಪಡಿ ನಿಯಮಗಳಲ್ಲಿ ಕೈಬಿಡಲಾಗಿದ್ದು, ಗ್ರಾಮಸಭೆಯ ಪೂರ್ವ ಸಮ್ಮತಿ ಇಲ್ಲದೆ ಭೂ ವರ್ಗಾವಣೆ ಪ್ರಸ್ತಾವನೆಗಳಿಗೆ ಅಂತಿಮ ಅನುಮೋದನೆ ನೀಡಬಹುದಾಗಿದೆ. ಕೇಂದ್ರ ಸರ್ಕಾರವು ಅಂತಿಮ ವರ್ಗಾವಣೆ ಪ್ರಸ್ತಾವನೆಗೆ ಅನುಮೋದನೆ ನೀಡಿದ ನಂತರ ಗ್ರಾಮ ಸಭೆಯ ಸಮ್ಮತಿ ಪಡೆಯುವ ಹಾಗೂ ಅರಣ್ಯ ಹಕ್ಕುಗಳನ್ನು ಖಾತರಿಗೊಳಿಸುವ ಹೊರೆಯನ್ನು ರಾಜ್ಯ ಸರ್ಕಾರಗಳ ಮೇಲೆ ಹೊರಿಸಲಾಗಿದೆ.
ತಜ್ಞರ ಪ್ರಕಾರ, ಇಂತಹ ಸ್ಥಿತಿಯು ಚರ್ಚೆಗೆ ಅವಕಾಶವಿಲ್ಲದ ಸ್ಥಿತಿಯನ್ನು ಸೃಷ್ಟಿಸಲಿದ್ದು, ಜನರ ಹಕ್ಕು ಹಾಗೂ ಅವರ ಸಮ್ಮತಿಯನ್ನು ಪರಿಣಾಮಕಾರಿಯಾಗಿ ಹತ್ತಿಕ್ಕುತ್ತದೆ. ಇದರೊಂದಿಗೆ ಒಡಿಶಾದಲ್ಲಿ ವೇದಾಂತ ಕಂಪನಿಯ ವಿರುದ್ಧದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ 2013ರ ಪ್ರಮುಖ ತೀರ್ಪು ಅರಣ್ಯ ಭೂಮಿ ವರ್ಗಾವಣೆ ಪ್ರಕ್ರಿಯೆಗಳಲ್ಲಿ ಸ್ಥಳೀಯ ಜನರ ಸಮ್ಮತಿಯನ್ನು ಪಡೆಯಬೇಕು ಎಂದು ಒತ್ತಿ ಹೇಳಿತ್ತು.
ಚೌಹಾಣ್ ಸಚಿವರಿಗೆ ಬರೆದಿದ್ದ ತಮ್ಮ ನಾಲ್ಕು ಪುಟಗಳ ಪತ್ರದಲ್ಲಿ ಈ ಎಲ್ಲ ಕಳವಳಗಳನ್ನು ವಿವರವಾಗಿ ಪ್ರಸ್ತಾಪಿಸಿದ್ದರು. ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಅಂತರ್ಜಾಲ ತಾಣದಲ್ಲಿನ ಚೌಹಾಣ್ ಸ್ವವಿವರಗಳ ಪ್ರಕಾರ, ಚೌಹಾಣ್ ಮಧ್ಯ ಪ್ರದೇಶದಲ್ಲಿನ ಪರಿಶಿಷ್ಟ ಪಂಗಡಗಳ ಗುಂಪುಗಳೊಂದಿಗೆ, ಬಹು ಮುಖ್ಯವಾಗಿ ಸಂಘ ಪರಿವಾರದ ವನವಾಸಿ ಕಲ್ಯಾಣ್ ಆಶ್ರಮದೊಂದಿಗೆ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ.
ಕಾರ್ಯಕಾರಿ ಗುಂಪಿನ ಸದಸ್ಯರಾದ ಶರದ್ ಲೆಲೆ ಪ್ರಕಾರ, ಚೌಹಾಣ್ ಅರಣ್ಯ ಹಕ್ಕುಗಳ ಕಾಯ್ದೆಯ ಸಮಸ್ಯೆಗಳ ಕುರಿತು ತುಂಬಾ ಆಸಕ್ತರಾಗಿದ್ದರು ಎಂದು ಹೇಳಲಾಗಿದೆ. ಚೌಹಾಣ್ ರಾಜಿನಾಮೆ ನೀಡಿ ತಿಂಗಳು ಕಳೆಯುತ್ತಿದ್ದಂತೆಯೆ, ಅರಣ್ಯ ಹಕ್ಕುಗಳ ಸಮಸ್ಯೆಗಳ ಕುರಿತು ಚರ್ಚಿಸಲು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಆಂತರಿಕ ಸಭೆಯು ಜುಲೈ 2023ಕ್ಕೆ ನಿಗದಿಯಾಗಿತ್ತು. ಆದರೆ, ಕೊನೆಯ ಗಳಿಗೆಯಲ್ಲಿ ಯಾವುದೇ ವಿವರಣೆ ನೀಡದೆ ಆ ಸಭೆಯನ್ನು ರದ್ದುಗೊಳಿಸಲಾಗಿತ್ತು ಎನ್ನುತ್ತಾರೆ ಕಾರ್ಯಕಾರಿ ಗುಂಪಿನ ಸದಸ್ಯರು.
ನಿಷ್ಕ್ರಿಯವಾದ ಆಯೋಗ
ಚೌಹಾಣ್ ರ ರಾಜಿನಾಮೆಯೊಂದಿಗೆ ಅರಣ್ಯ ಹಕ್ಕುಗಳ ವಿಚಾರವು ಅತಂತ್ರವಾಗಿದೆ. “ಅಧ್ಯಕ್ಷರು ರಾಜಿನಾಮೆ ನೀಡಿರುವುದರಿಂದ ಆಯೋಗವು ನಿಷ್ಕ್ರಿಯವಾಗಿದೆ” ಎನ್ನುತ್ತಾರೆ ಆಯೋಗದ ಸದಸ್ಯ ಮಿಲಿಂದ್ ಥಟ್ಟೆ.
“ನಾವು ವಾಸ್ತವವಾಗಿ ನಿಗದಿಯಾಗದೆ ಸಭೆಗಳನ್ನು ನಡೆಸುವಂತಿಲ್ಲ. ಸಮುದಾಯಗಳ ಅರಣ್ಯ ಹಕ್ಕುಗಳ ಕುರಿತು ಅಧ್ಯಯನವನ್ನು ಇಂದಿಗೂ ಔಪಚಾರಿಕವಾಗಿ ಅಂಗೀಕರಿಸಲಾಗಿಲ್ಲ. ಆ ಅಧ್ಯಯನ ವರದಿಯು ಇನ್ನೂ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಬಳಿಯೇ ಬಾಕಿ ಉಳಿದಿದೆ. ಅರಣ್ಯ ಗ್ರಾಮಗಳು ಎಂಬ ಪರಿಕಲ್ಪನೆಯ ಕುರಿತು ನಾವು ನಡೆಸಬೇಕಿದ್ದ ಹೊಸ ಅಧ್ಯಯನಗಳನ್ನೂ ಪ್ರಾರಂಭಿಸಲು ಸಾಧ್ಯವಾಗಿಲ್ಲ. ನಾವು ಸಂಪೂರ್ಣವಾಗಿ ಸ್ತಬ್ಧರಾಗಿದ್ದೇವೆ” ಎನ್ನುತ್ತಾರೆ ತಟ್ಟೆ.
“ಕಾರ್ಯಕಾರಿ ಗುಂಪಿನ ಓರ್ವ ಸದಸ್ಯನಾಗಿ ಅಧ್ಯಕ್ಷರ ಉಳಿಕೆ ಅವಧಿಯಲ್ಲಿ ಏನು ಮಾಡಬೇಕು ಎಂದು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗವು ಯೋಜಿಸಿತ್ತು. ಹೀಗಾಗಿ ಈ ರಾಜಿನಾಮೆಯು ಅನಿರೀಕ್ಷಿತವಾಗಿದೆ” ಎಂದೂ ತಟ್ಟೆ ಹೇಳುತ್ತಾರೆ.
ಸೌಜನ್ಯ: newslaundry.com ನಲ್ಲಿ ಪ್ರಕಟವಾದ Rishika Pardikar ಅವರ ವಿಶೇಷ ವರದಿ