ಬಿಹಾರ | ಕಾರ್ಯನಿರ್ವಹಿಸದ ವಿಮಾನ ನಿಲ್ದಾಣ; ರನ್ ವೇ ನಲ್ಲೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು!
ಸಾಂದರ್ಭಿಕ ಚಿತ್ರ | PC : PTI
ಪಾಟ್ನಾ: ಬಿಹಾರದ ಸಹರ್ಸಾ ವಿಮಾನ ನಿಲ್ದಾಣದ ಸುಮಾರು 300 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವುದು ಮತ್ತು ಅಣಕು ಪರೀಕ್ಷೆ ಬರೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಸಹರ್ಸಾ ರನ್ ವೇ ಸಾರ್ವಜನಿಕ ಗಮನ ಸೆಳೆಯುತ್ತಿರುವುದು ಇದೇ ಮೊದಲಲ್ಲ. ಹಿಂದೆ ವೈರಲ್ ಆದ ವಿಡಿಯೋ ಗಳಲ್ಲಿ ಸ್ಥಳೀಯರು ಬೆಳಗಿನ ವಾಕಿಂಗ್ ಗೆ ಮತ್ತು ಬೈಕ್ ರೇಸ್‌ಗಳಿಗೂ ಈ ರನ್ ವೇ ಬಳಸುತ್ತಿರುವುದು ಸೆರೆಯಾಗಿತ್ತು.
ಉಡಾನ್ ಯೋಜನೆಯಡಿಯಲ್ಲಿ, ಸಹರ್ಸಾ ವಿಮಾನ ನಿಲ್ದಾಣವು ಅದರ ಅಭಿವೃದ್ಧಿಗಾಗಿ 25 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ರಾಜ್ಯದಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಬಿಹಾರ ಸರ್ಕಾರ ಅನುದಾನ ಕೋರಿದ್ದರಿಂದ ನಾಗರಿಕ ವಿಮಾನಯಾನ ಸಚಿವಾಲಯ ಇತ್ತೀಚೆಗೆ ಅಭಿವೃದ್ಧಿಗೆ ಅನುಮೋದನೆ ನೀಡಿದೆ.
ಯೋಜನಾ ಮೌಲ್ಯಮಾಪನ ಸಮಿತಿ (ಪಿಇಸಿ) ಬಿಹಾರದಲ್ಲಿ ಆರು ಸಣ್ಣ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲು ಶಿಫಾರಸು ಮಾಡಿದೆ. ಅದರಂತೆ ಮೊದಲ ಹಂತದಲ್ಲಿ ಪ್ರತಿಯೊಂದಕ್ಕೂ 25 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಪೂರ್ಣಿಯಾದಲ್ಲಿ ಒಂದು ವಿಮಾನ ನಿಲ್ದಾಣ ಸೇರಿದಂತೆ ರಾಜ್ಯದಾದ್ಯಂತ ಏಳು ಹೊಸ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಒಟ್ಟಾರೆಯಾಗಿ 190 ಕೋಟಿ ರೂ.ಗಳನ್ನು ಅನುಮೋದಿಸಲಾಗಿದೆ.
ಇತ್ತೀಚಿನ ವೀಡಿಯೊದಲ್ಲಿ, ಖಾಸಗಿ ತರಬೇತಿ ಸಂಸ್ಥೆಯ ಮುಖ್ಯಸ್ಥರು ವಿಮಾನ ನಿಲ್ದಾಣದ ರನ್‌ವೇ ಬಳಸುವುದರ ಹಿಂದಿನ ತಾರ್ಕಿಕತೆಯನ್ನು ವಿವರಿಸಿದ್ದಾರೆ.
"ನಮ್ಮ ಕ್ಯಾಂಪಸ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ, ಮುಖ್ಯವಾಗಿ ಪೊಲೀಸ್ ಮತ್ತು ಸೇನೆಗೆ ಸೇರಲು ತಯಾರಿ ನಡೆಸುತ್ತಿರುವ ಇಷ್ಟು ದೊಡ್ಡ ಸಂಖ್ಯೆಯ ಉದ್ಯೋಗ ಆಕಾಂಕ್ಷಿಗಳಿಗೆ ಸ್ಥಳಾವಕಾಶ ಕಲ್ಪಿಸಲು ನಮಗೆ ಜಾಗದ ಕೊರತೆಯಿದೆ. ವಿಮಾನ ನಿಲ್ದಾಣದಿಂದ ವಿಮಾನಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿದ ನಂತರ ನಾವು ಈ ಉದ್ದೇಶಗಳಿಗಾಗಿ ರನ್ ವೇ ಬಳಸುವುದಿಲ್ಲ", ಎಂದು ಅವರು ಹೇಳಿದರು.
ಇತರ ಖಾಸಗಿ ತರಬೇತಿ ಕೇಂದ್ರಗಳೂ ಇದೇ ರೀತಿಯ ಉದ್ದೇಶಗಳಿಗಾಗಿ ರನ್ ವೇಯನ್ನು ಬಳಸುತ್ತಿವೆ ಎಂದು ಅವರು ಹೇಳಿದರು.
ಸಹರ್ಸಾ ವಿಮಾನ ನಿಲ್ದಾಣದ ರನ್ ವೇಯಲ್ಲಿ ದೈಹಿಕ ತರಬೇತಿ ಹಲವಾರು ವರ್ಷಗಳಿಂದ ನಡೆಯುತ್ತಿದೆ ಎಂದು ಕೋಚಿಂಗ್ ಸೆಂಟರ್ ಮಾಲೀಕರು ದೂರದರ್ಶನ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ. "ಈಗ, ನಾವು ಇಲ್ಲಿಯೂ ಲಿಖಿತ ಪರೀಕ್ಷೆಗಳನ್ನು ನಡೆಸಲು ಪ್ರಾರಂಭಿಸಿದ್ದೇವೆ" ಎಂದು ಅವರು ಹೇಳಿದರು.