‘‘ದ ಕೇರಳ ಸ್ಟೋರಿ’’ಗೆ ರಾಷ್ಟ್ರ ಪ್ರಶಸ್ತಿ; ಎಫ್‌ಟಿಐಐಯ ವಿದ್ಯಾರ್ಥಿಗಳ ಸಂಘಟನೆ ತರಾಟೆ
ದ ಕೇರಳ ಸ್ಟೋರಿ | PC ; X
ಪುಣೆ, ಆ. 5: ‘ದ ಕೇರಳ ಸ್ಟೋರಿ’ ಚಲನಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ನೀಡುವ ನಿರ್ಧಾರವನ್ನು ಭಾರತೀಯ ಚಲನಚಿತ್ರ ಹಾಗೂ ಟೆಲಿವಿಷನ್ ಸಂಸ್ಥೆ (ಎಫ್‌ಟಿಐಐ)ಯ ವಿದ್ಯಾರ್ಥಿಗಳ ಸಂಘಟನೆ ಖಂಡಿಸಿದೆ.
‘ದ ಕೇರಳ ಸ್ಟೋರಿ’ ಚಲನಚಿತ್ರಕ್ಕೆ ಸರಕಾರ ಬೆಂಬಲಿತ ಮನ್ನಣೆ ‘‘ಕೇವಲ ನಿರಾಶಾದಾಯಕ ಮಾತ್ರ ಅಲ್ಲ. ಅಪಾಯಕಾರಿ ಕೂಡ ಹೌದು’’ ಎಂದು ಸಂಘಟನೆ ಹೇಳಿದೆ.
71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ‘‘ದಿ ಕೇರಳ ಸ್ಟೋರಿ’’ ಚಲನಚಿತ್ರಕ್ಕೆ ನಿರ್ದೇಶಕ ಸುದೀಪ್ತೊ ಸೇನ್ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇದಲ್ಲದೆ, ಈ ಚಲನಚಿತ್ರ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದೆ.
ಕೇರಳದ ಮಹಿಳೆಯರನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ ಹಾಗೂ ಅವರನ್ನು ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್‌ಐಎಸ್) ನೇಮಕಾತಿ ಮಾಡಿಕೊಳ್ಳುತ್ತಿದೆ ಎಂದು ಚಿತ್ರಿಸುವ ಕಾರಣಕ್ಕಾಗಿ ಈ ಚಲನಚಿತ್ರ ವಿವಾದದ ಕೇಂದ್ರ ಬಿಂದುವಾಗಿತ್ತು.
ಆಗಸ್ಟ್ 2ರಂದು ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ ಎಫ್‌ಟಿಐಐ ವಿದ್ಯಾರ್ಥಿಗಳ ಸಂಘಟನೆ, ‘‘ದಿ ಕೇರಳ ಸ್ಟೋರಿ’’ ‘‘ಚಲನಚಿತ್ರವಲ್ಲ. ಬದಲಾಗಿ ಅದು ಆಯುಧ’’ ಎಂದು ಹೇಳಿದೆ.
‘‘ಸರಕಾರ ಮತ್ತೊಮ್ಮೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ: ಸಿನೆಮಾದ ವೇಷದಲ್ಲಿರುವ ಅಪಪ್ರಚಾರವೊಂದು ತನ್ನ ಬಹುಸಂಖ್ಯಾತ ಹಾಗೂ ದ್ವೇಷಪೂರಿತ ಕಾರ್ಯಸೂಚಿಗೆ ಹೊಂದಾಣಿಕೆಯಾಗುವುದಿದ್ದರೆ, ಸರಕಾರ ಅದನ್ನು ಪುರಸ್ಕರಿಸುತ್ತದೆ. ದ ಕೇರಳ ಸ್ಟೋರಿ ಚಲನಚಿತ್ರವಲ್ಲ. ಅದು ಆಯುಧ’’ ಎಂದು ಸಂಘಟನೆಯ ಹೇಳಿಕೆ ತಿಳಿಸಿದೆ.