×
Ad

ಐಐಟಿ ವಿದ್ಯಾರ್ಥಿಗಳಿಗೆ ನೋಟು ಎಣಿಸುವ ಯಂತ್ರ ತಯಾರಿಸಲು ಹೇಳಿದ ಉಪರಾಷ್ಟ್ರಪತಿ!

Update: 2023-12-11 22:31 IST

ಜಗದೀಪ್ ಧನ್ಕರ್ | Photo : @VPIndia

ಪಾಟ್ನಾ : ಧನಬಾದ್ ನ ಐಐಟಿ(ಇಂಡಿಯನ್ ಸ್ಕೂಲ್ ಆಫ್ ಮೈನ್ಸ್)ನಲ್ಲಿ ಆಯೋಜಿಸಿದ್ದ 43 ನೇ ಘಟಿಕೋತ್ಸವದಲ್ಲಿ ಭಾಗವಹಿಸಿದ್ದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ವಿದ್ಯಾರ್ಥಿಗಳಿಗೆ ವೇಗವಾಗಿ ನೋಟು ಎಣಿಸುವ ಯಂತ್ರ ತಯಾರಿಸಲು ಹೋಮ್ ವರ್ಕ್ ನೀಡಿ ಸುದ್ದಿಯಾಗಿದ್ದಾರೆ.

ಅವರು ಮಾತನಾಡಿರುವ ವೀಡಿಯೋ ತುಣುಕನ್ನು ಐಐಟಿ ತನ್ನX ಖಾತೆಯಲ್ಲಿ ಹಂಚಿಕೊಂಡಿದೆ.

ಡಿಸೆಂಬರ್ 10 ರಂದು ಧನಬಾದ್ ಐಐಟಿಯಲ್ಲಿನ ಘಟಿಕೋತ್ಸವ ಭಾಷಣದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. “ನಾನು ನಿಮ್ಮೆಲ್ಲರಲ್ಲಿ ಕೇಳಿಕೊಳ್ಳುತ್ತೇನೆ, ತಂತ್ರಜ್ಞಾನವನ್ನು ಬಳಸಿಕೊಳ್ಳಿ. ಕರೆನ್ಸಿ ನೋಟುಗಳನ್ನು ವೇಗವಾಗಿ ಎಣಿಸಬಲ್ಲ ಯಂತ್ರ ಕಂಡು ಹುಡುಕಿ. ನೋಟುಗಳನ್ನು ವೇಗವಾಗಿ ಎಣಿಸಲು ಮಾನವ ಸಂಪನ್ಮೂಲಕ್ಕೆ ಸಮಸ್ಯೆಯಿದೆ. ಬ್ಯಾಂಕಿನ ವ್ಯವಸ್ಥಾಪಕನ ಸ್ಥಿತಿ ನೋಡಿದೆ. ನಾವು ಎಣಿಸುತ್ತಿದ್ದೇವೆ, ಎಣಿಸುತ್ತಿದ್ದೇವೆ.. ಎಣಿಸುತ್ತಲೇ ಇದ್ದೇವೆ. ನಮ್ಮ ಕೆಲಸದ ಅವಧಿ ಮೀರಿಯೂ ಎಣಿಸುತ್ತಿದ್ದೇವೆ. ರಜೆಯನ್ನು ಬದಿಗಿಟ್ಟು ಕೆಲಸ ಮಾಡಿದ್ದೇವೆ ಎಂದು ಹೇಳಿದರು” ಎಂದು ಉಪರಾಷ್ಟ್ರಪತಿಗಳು ವಿದ್ಯಾರ್ಥಿಗಳ ಗಮನ ಸೆಳೆದರು.

“ಎಲ್ಲದಕ್ಕೂ ಒಂದು ಮಿತಿಯಿದೆ. ಒಬ್ಬ ಮನುಷ್ಯ ಎಷ್ಟು ಕರೆನ್ಸಿ ನೋಟುಗಳನ್ನು ಎಣಿಸಬಹುದು? ನಮ್ಮ ಮತಪತ್ರಗಳೂ ವೇಗವಾಗಿ ಎಣಿಸಲ್ಪಡುತ್ತಿವೆ. ನಿಮಗೆಲ್ಲರಿಗೂ ನಾನು ಹೋಂ ವರ್ಕ್ ಕೊಡುತ್ತಿದ್ದೇನೆ. ನೀವು ನಿಮ್ಮ ತಂತ್ರಜ್ಞಾನ ವಿಜ್ಞಾನವನ್ನು ಬಳಸಿಕೊಳ್ಳಿ. ಎಷ್ಟೇ ಕರೆನ್ಸಿ ಇದ್ದರೂ ಅದನ್ನು ವೇಗವಾಗಿ ಎಣಿಸುವ ಯಂತ್ರ ತಯಾರಿಸಿ” ಎಂದು ಅವರು ವಿದ್ಯಾರ್ಥಿಗಳನ್ನು ಕೇಳಿಕೊಂಡರು.

“ದೇಶದ ಪರಿಸರ ವ್ಯವಸ್ಥೆ ಬದಲಾಗಿದೆ. ಭ್ರಷ್ಟಾಚಾರಕ್ಕೆ ನಿರ್ದಿಷ್ಟ ಜಾಗವೆಂದೇನೂ ಇಲ್ಲ. ಅದು ಎಲ್ಲಿಬೇಕಾದರೂ ಬರಬಹುದು. ಮೊದಲು ಯೋಚಿಸುತ್ತಿದ್ದೆವು, ನಾವು ಕಾನೂನಿಗಿಂತ ಮೇಲು ಎಂದು. ನಮ್ಮ ಬಳಿಗೆ ಕಾನೂನು ಬರಲು ಸಾಧ್ಯವಿಲ್ಲ ಎಂದು. ಆದರೆ ಈಗ ಕಾನೂನಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಅವರು ಅಭಿಪ್ರಾಯಪಟ್ಟರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News