ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆಯ ಶವಪೆಟ್ಟಿಗೆಗಳಿಗೆ ಹೊಡೆಯುವ ಕೊನೆಯ ಮೊಳೆ: ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ | PTI
ಕೋಲ್ಕತಾ, ಆ. 20: ಸಂವಿಧಾನದ (130ನೇ ತಿದ್ದುಪಡಿ) ಮಸೂದೆ, 2025 ಮಸೂದೆಯನ್ನು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಖಂಡಿಸಿದ್ದಾರೆ. ಇದು ಸೂಪರ್ ಎಮರ್ಜನ್ಸಿ (ಅನಧಿಕೃತ ತುರ್ತು ಪರಿಸ್ಥಿತಿ)ಗಿಂತಲೂ ಹೆಚ್ಚಿನ ತೀವ್ರತೆಯ ಕ್ರಮವಾಗಿದ್ದು, ಭಾರತದಲ್ಲಿ ಪ್ರಜಾಪ್ರಭುತ್ವದ ಯುಗವನ್ನು ಶಾಶ್ವತವಾಗಿ ಕೊನೆಗೊಳಿಸುತ್ತದೆ ಎಂದು ಅವರು ಬಣ್ಣಿಸಿದ್ದಾರೆ.
I condemn the 130th Constitutional Amendment Bill, proposed to be tabled, by the Government of India today. I condemn it as a step towards something that is more than a super- Emergency, a step to end the democratic era of India for ever. This draconian step comes as a death… pic.twitter.com/Vx78R1fh6V
— Mamata Banerjee (@MamataOfficial) August 20, 2025
ಪ್ರಸ್ತಾಪಿತ ಶಾಸನವು ದೇಶದ ನ್ಯಾಯಾಂಗದ ಸ್ವಾತಂತ್ರ್ಯವನ್ನು ಕೊನೆಗೊಳಿಸುತ್ತದೆ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ತೃಣಮೂಲ ಕಾಂಗ್ರೆಸ್‌ನ ಮುಖ್ಯಸ್ಥೆ ಬಣ್ಣಿಸಿದ್ದಾರೆ.
‘‘ಸಂವಿಧಾನದ 130ನೇ ತಿದ್ದುಪಡಿಯನ್ನು ನಾನು ಖಂಡಿಸುತ್ತೇನೆ. ಇದು ಸೂಪರ್ ಎಮರ್ಜನ್ಸಿಗಿಂತಲೂ ಕಠೋರ ಕ್ರಮವಾಗಿದ್ದು, ದೇಶದಲ್ಲಿ ಪ್ರಜಾಪ್ರಭುತ್ವವನ್ನು ಶಾಶ್ವತವಾಗಿ ಕೊನೆಗೊಳಿಸುತ್ತದೆ. ಇದು ಭಾರತದ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯ ಶವಪೆಟ್ಟಿಗೆಗಳಿಗೆ ಹೊಡೆಯುವ ಕೊನೆಯ ಮೊಳೆ ಆಗಲಿದೆ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘‘ಈ ಮಸೂದೆಗಳ ಉದ್ದೇಶ ಒಬ್ಬ ವ್ಯಕ್ತಿ-ಒಂದು ಪಕ್ಷ- ಒಂದು ಸರಕಾರ ವ್ಯವಸ್ಥೆಯನ್ನು ಬಲಪಡಿಸುವುದಾಗಿದೆ. ಅವುಗಳು ಸಂವಿಧಾನದ ಮೂಲ ಸ್ವರೂಪವನ್ನೇ ಧ್ವಂಸಗೊಳಿಸಲಿದೆ’’ ಎಂದು ಅವರು ಹೇಳಿದರು. ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕಾಗಿ ಯಾವುದೇ ಬೆಲೆ ತೆತ್ತಾದರೂ ಈ ಮಸೂದೆಗಳನ್ನು ವಿರೋಧಿಸಬೇಕಾಗಿದೆ ಎಂದು ಅವರು ನುಡಿದರು.