×
Ad

ಮಹಾಕುಂಭ ಮೇಳದ ಕಾಲ್ತುಳಿತದಲ್ಲಿ ‘‘ಸಾವಿರಾರು ಮಂದಿ ಸಾವು’’: ಖರ್ಗೆ ಹೇಳಿಕೆಗೆ ರಾಜ್ಯಸಭೆಯಲ್ಲಿ ತೀವ್ರ ವಿರೋಧ

Update: 2025-02-03 22:25 IST

Photo: PTI

ಹೊಸದಿಲ್ಲಿ : ಮಹಾ ಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಶ್ರದ್ಧಾಂಜಲಿ ಸಲ್ಲಿಸುವ ಸಂದರ್ಭ ನೀಡಿದ ಹೇಳಿಕೆ ರಾಜ್ಯಸಭೆಯಲ್ಲಿ ವಿವಾದಕ್ಕೆ ಕಾರಣವಾಯಿತು.

ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಮಲ್ಲಿಕಾರ್ಜುನ ಖರ್ಗೆ ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಂದರ್ಭ ‘‘ಕುಂಭದಲ್ಲಿ ಮೃತಪಟ್ಟ ಸಾವಿರಾರು ಮಂದಿಗೆ’’ ಎಂದು ಹೇಳಿದರು.

‘‘ಮಹಾಕುಂಭದಲ್ಲಿ ಮೃತಪಟ್ಟವರಿಗೆ ನಾನು ನನ್ನ ಶ್ರದ್ಧಾಂಜಲಿ ಸಲ್ಲಿಸುತ್ತೇನೆ... ಕುಂಭದಲ್ಲಿ ಮೃತಪಟ್ಟ ಸಾವಿರಾರು ಮಂದಿಗೆ’’ ಎಂದು ಖರ್ಗೆ ಹೇಳಿದರು. ಇದು ಆಡಳಿತಾರೂಢ ಪಕ್ಷದ ಸದಸ್ಯರ ಪ್ರತಿಭಟನೆಗೆ ಕಾರಣವಾಯಿತು.

ಸಭಾಪತಿ ಜಗದೀಪ್ ಧನ್ಕರ್ ಹೇಳಿಕೆಯನ್ನು ಹಿಂಪಡೆಯುವಂತೆ ಖರ್ಗೆ ಅವರಿಗೆ ಸೂಚಿಸಿದರು. ಕೂಡಲೇ ಖರ್ಗೆ ಈ ಸಂಖ್ಯೆ ತನ್ನ ಅಂದಾಜು. ಅದು ತಪ್ಪಾಗಿದ್ದಾರೆ, ಸರಕಾರ ನಿಖರ ಸಂಖ್ಯೆಯನ್ನು ನೀಡಬೇಕು. ತಾನು ತಪ್ಪು ತಿದ್ದಿಕೊಳ್ಳಲು ಸಿದ್ಧ ಎಂದರು.

‘‘ಇದು ನನ್ನ ಅಂದಾಜು. ಇದು ಸುಳ್ಳಾದರೆ, ನೀವು (ಸರಕಾರ) ಸತ್ಯವನ್ನು ಹೇಳಬೇಕು’’ ಎಂದು ಖರ್ಗೆ ಸದನಕ್ಕೆ ತಿಳಿಸಿದರು.

‘‘ನಾನು ಯಾರೊಬ್ಬರನ್ನೂ ದೂಷಿಸಲು ಸಾವಿರಾರು ಮಂದಿ ಮೃತಪಟ್ಟರು ಎಂದು ಹೇಳಿಲ್ಲ. ಆದರೆ, ಎಷ್ಟು ಮಂದಿ ಮೃತಪಟ್ಟರು, ಕನಿಷ್ಠ ಆ ಮಾಹಿತಿಯನ್ನಾದರೂ ನೀಡಿ. ನಾನು ಒಂದು ವೇಳೆ ತಪ್ಪು ಮಾಹಿತಿ ನೀಡಿದ್ದರೆ, ಕ್ಷಮೆ ಕೋರುತ್ತೇನೆ. ಎಷ್ಟು ಜನರು ಮೃತಪಟ್ಟಿದ್ದಾರೆ, ಎಷ್ಟು ಮಂದಿ ನಾಪತ್ತೆಯಾಗಿದ್ದಾರೆ ಎಂಬ ಅಂಕಿ-ಅಂಶವನ್ನು ಅವರು ನೀಡಬೇಕು’’ ಎಂದು ಖರ್ಗೆ ಹೇಳಿದರು.

ಖರ್ಗೆ ಅವರ ಹೇಳಿಕೆ ಸದನದ ಪ್ರತಿಯೊಬ್ಬರನ್ನೂ ಅಚ್ಚರಿಗೊಳಿಸಿದೆ ಎಂದು ಧನ್ಕರ್ ಹೇಳಿದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News