×
Ad

ಉತ್ತರ ಪ್ರದೇಶ | ಸಿಆರ್‌ಪಿಎಫ್ ಯೋಧನ ಮೇಲೆ ಹಲ್ಲೆ ನಡೆಸಿದ ಮೂವರು ಕನ್ವರಿಯಾಗಳ ಬಂಧನ

Update: 2025-07-20 13:21 IST

Screengrab: X/@GauravPandhi

ಮಿರ್ಝಾಪುರ್: ರೈಲ್ವೆ ಟಿಕೆಟ್ ವಿಚಾರದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಯೋಧನೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮೂವರು ಕನ್ವರಿಯಾಗಳನ್ನು ಬಂಧಿಸಿರುವ ಘಟನೆ ಮಿರ್ಝಾಪುರ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ ಎಂದು ರವಿವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರ ಮೀಸಲು ಪೊಲೀಸ್ ಪಡೆಯ ಯೋಧರೊಬ್ಬರು ಬ್ರಹ್ಮಪುತ್ರ ರೈಲಿನಲ್ಲಿ ತೆರಳಲು ಟಿಕೆಟ್ ಪಡೆಯಲು ಮುಂದಾದಾಗ, ಜಾರ್ಖಂಡ್ ನಲ್ಲಿರುವ ಬೈದ್ಯನಾಥ್ ಧಾಮಕ್ಕೆ ತೆರಳುತ್ತಿದ್ದ ಕನ್ವರಿಯಾಗಳೂ ಕೂಡಾ ಅದೇ ರೈಲಿನ ಟಿಕೆಟ್ ಪಡೆಯಲು ಮುಂದಾಗಿದ್ದಾರೆ. ಈ ವೇಳೆ ಟಿಕೆಟ್ ಖರೀದಿಯ ವಿಚಾರದಲ್ಲಿ ವಾಗ್ವಾದ ನಡೆದಿದ್ದು, ಕನ್ವರಿಯಾಗಳು ಯೋಧನಿಗೆ ಹಲ್ಲೆ ನಡೆಸಿದ್ದಾರೆ. 

ಈ ವೇಳೆ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸರಕಾರಿ ರೈಲ್ವೆ ಪೊಲೀಸ್ ಯೋಧರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಹಾಗೂ ಇದರ ಬೆನ್ನಿಗೇ, ಕೇಂದ್ರ ಮೀಸಲು ಪೊಲೀಸ್ ಪಡೆಯ ಯೋಧನಿಗೆ ನೆರವು ಒದಗಿಸಲು ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ರವಾನಿಸಲಾಗಿದೆ ಎಂದು ಸರಕಾರಿ ರೈಲ್ವೆ ಪೊಲೀಸ್ ಇನ್ಸ್ ಪೆಕ್ಟರ್ ರಾಘವೇಂದ್ರ ಸಿಂಗ್ ತಿಳಿಸಿದ್ದಾರೆ.

ಕೇಂದ್ರ ಮೀಸಲು ಪೊಲೀಸ್ ಪಡೆಯ ಯೋಧ ಕರ್ತವ್ಯಕ್ಕೆ ಹಾಜರಾಗಲು ಮಣಿಪುರಕ್ಕೆ ತೆರಳುತ್ತಿದ್ದರು. ಅದಕ್ಕಾಗಿ ಬ್ರಹ್ಮಪುತ್ರ ಎಕ್ಸ್ ಪ್ರೆಸ್ ರೈಲಿನಲ್ಲಿ ಅವರಿಗೆ ಪ್ರಯಾಣದ ಸೌಕರ್ಯ ಕಲ್ಪಿಸಲಾಗಿತ್ತು ಎಂದೂ ಸರಕಾರಿ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳು ಹಾಗೂ ರೈಲ್ವೆ ಕಾಯ್ದೆಯಡಿ ಆರೋಪಿ ಕನ್ವರಿಯಾಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದಾದ ನಂತರ, ಜಾಮೀನಿನ ಮೇಲೆ ಬಂಧಿತ ಕನ್ವರಿಯಾಗಳನ್ನು ಬಿಡುಗಡೆಗೊಳಿಸಲಾಯಿತು ಎಂದು ಸರಕಾರಿ ರೈಲ್ವೆ ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News