×
Ad

Uttar Pradesh | ಆನ್‌ಲೈನ್‌ ಗೇಮಿಂಗ್‌ಗೆ ಪೋಷಕರ ವಿರೋಧ; ಮೂವರು ಅಪ್ರಾಪ್ತ ಸಹೋದರಿಯರು ಆತ್ಮಹತ್ಯೆ

Update: 2026-02-04 11:14 IST
Photo| NDTV

ಹೊಸದಿಲ್ಲಿ, ಫೆ. 4: ಉತ್ತರ ಪ್ರದೇಶದ ಗಾಝಿಯಾಬಾದ್‌ ನಲ್ಲಿ ಮೂವರು ಅಪ್ರಾಪ್ತ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ. ಸಾವಿನ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಆನ್‌ಲೈನ್‌ ಗೇಮಿಂಗ್‌ ಗೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಮನನೊಂದು ಈ ನಿರ್ಧಾರ ಕೈಗೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

12, 14 ಮತ್ತು 16 ವರ್ಷ ವಯಸ್ಸಿನ ಸಹೋದರಿಯರು ಬಹುಮಹಡಿ ಕಟ್ಟಡದ ಒಂಭತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕೋವಿಡ್‌–19 ಸಾಂಕ್ರಾಮಿಕ ಅವಧಿಯಲ್ಲಿ ಪಾಖಿ, ಪ್ರಾಚಿ ಮತ್ತು ವಿಶಿಕಾ ಎಂದು ಗುರುತಿಸಲಾದ ಈ ಮೂವರು, ಆನ್‌ಲೈನ್‌ ಆಟಗಳಿಗೆ ಹೆಚ್ಚು ಒಲವು ತೋರಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಟಾಸ್ಕ್‌ ಆಧಾರಿತ ಕೊರಿಯನ್‌ ಆನ್‌ಲೈನ್‌ ಆಟವೊಂದನ್ನು ನಿರಂತರವಾಗಿ ಆಡುತ್ತಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.

ಗಾಝಿಯಾಬಾದ್‌ ನ ಭಾರತ್‌ ನಗರ ವಸತಿ ಪ್ರದೇಶದಲ್ಲಿ ಬೆಳಗಿನ ಜಾವ ಸುಮಾರು 2 ಗಂಟೆ ವೇಳೆಗೆ ಘಟನೆ ನಡೆದಿದ್ದು, ಸ್ಥಳೀಯರ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಗಂಭೀರವಾಗಿ ಗಾಯಗೊಂಡಿದ್ದ ಮೂವರನ್ನು 108 ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಮೃತಪಟ್ಟಿದ್ದಾರೆಂದು ಘೋಷಿಸಿದ್ದಾರೆ.

“ಫೆ. 4ರಂದು ಬೆಳಗಿನ ಜಾವ 2.15ರ ಸುಮಾರಿಗೆ ಭಾರತ್‌ ಸಿಟಿಯಿಂದ ಕರೆ ಬಂದಿತ್ತು. ಒಂಭತ್ತನೇ ಮಹಡಿಯ ಬಾಲ್ಕನಿಯಿಂದ ಮೂವರು ಅಪ್ರಾಪ್ತ ಬಾಲಕಿಯರು ಹಾರಿದ್ದಾರೆಂಬ ಮಾಹಿತಿ ಸಿಕ್ಕಿತು. ಸ್ಥಳಕ್ಕೆ ತೆರಳಿದಾಗ ಮೂವರು ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾದರು,” ಎಂದು ಎಸಿಪಿ ಅತುಲ್‌ ಕುಮಾರ್‌ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.   

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News