ದಿಲ್ಲಿ | ಮೂರು ಮಹಡಿಗಳ ಕಟ್ಟಡ ಕುಸಿತ: ಓರ್ವ ಮೃತ್ಯು
Photo credit: ANI
ಹೊಸದಿಲ್ಲಿ: ಶುಕ್ರವಾರ ದಿಲ್ಲಿಯ ಬಡಾ ಹಿಂದೂ ರಾವ್ ಪ್ರದೇಶದಲ್ಲಿ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡ ಕುಸಿದ ಪರಿಣಾಮ, 46 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಮನೋಜ್ ಶರ್ಮ ಎಂದು ಗುರುತಿಸಲಾಗಿದ್ದು, ಅವರು ಕುಸಿದು ಬಿದ್ದ ಕಟ್ಟಡದಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡಿದ್ದ ಅವರನ್ನು ಹೊರ ತೆಗೆದು ಹಿಂದೂ ರಾವ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಕಟ್ಟಡದ ಹೊರಗೆ ನಿಲ್ಲಿಸಲಾಗಿದ್ದ ಟ್ರಕ್‌ಗೂ ಈ ಘಟನೆಯಲ್ಲಿ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಈ ಘಟನೆ ಇಂದು ನಸುಕಿನ ವೇಳೆ ನಡೆದಿದೆ. ತಕ್ಷಣವೇ ಘಟನಾ ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳನ್ನು ರವಾನಿಸಲಾಗಿದೆ. ಈ ಘಟನೆಯಲ್ಲಿ ನೆಲಮಹಡಿ, ಮೊದಲ ಮತ್ತು ಎರಡನೇ ಮಹಡಿ ಕುಸಿದಿದೆ. ಇದರಿಂದಾಗಿ ಮೂರು ಮಳಿಗೆ ಹಾಗೂ ಗೋದಾಮು ಸಂಪೂರ್ಣವಾಗಿ ನೆಲಸಮಗೊಂಡಿವೆ. ಇಲ್ಲಿ ಬ್ಯಾಗ್ ಮತ್ತು ಕ್ಯಾನ್ವಾಸ್ ಬಟ್ಟೆಗಳ ಅಂಗಡಿಗಳಿದ್ದವು" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಮೃತ ಮನೋಜ್ ಶರ್ಮ 7A ಸಂಖ್ಯೆಯ ಮಳಿಗೆಯಲ್ಲಿ ಕಳೆದ 30 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಈ ಘಟನೆಯಲ್ಲಿ ಬೇರಾವುದೇ ಸಾವು-ನೋವು ಘಟನೆಗಳು ವರದಿಯಾಗಿಲ್ಲ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಕಟ್ಟಡದ ಕಳಪೆ ನಿರ್ವಹಣೆ ಹಾಗೂ ಅಜಾಗರೂಕತೆಯಿಂದ ಸಂಭವಿಸಿದ ಸಾವು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದ ಕುರಿತು ತನಿಖೆ ಪ್ರಗತಿಯಲ್ಲಿದೆ" ಎಂದು ಉಪ ಪೊಲೀಸ್ ಅಯುಕ್ತರು ಹೇಳಿದ್ದಾರೆ.