ಅಲಹಾಬಾದ್ ಹೈಕೋರ್ಟ್ ನ ನ್ಯಾಯಾಧೀಶರಿಗೆ ಕ್ರಿಮಿನಲ್ ವಿಚಾರಣೆ ನಡೆಸಲು ನಿಷೇಧ; ಆದೇಶ ವಾಪಸ್ ಪಡೆದ ಸುಪ್ರೀಂ ಕೋರ್ಟ್
Photo credit: PTI
ಹೊಸದಿಲ್ಲಿ: ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶರೊಬ್ಬರಿಗೆ ನಿವೃತ್ತಿಯವರೆಗೆ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುವುದನ್ನು ನಿಷೇಧಿಸಿದ್ದ ತನ್ನದೇ ಆದೇಶವನ್ನು ಸುಪ್ರೀಂ ಕೋರ್ಟ್ ವಾಪಸ್ ಪಡೆದಿದೆ.
ಆಗಸ್ಟ್ 4ರಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠವು, ಹಣ ವಸೂಲಾತಿ ಮಾಡಲು ಅವಕಾಶವಿರುವ ಸಂದರ್ಭದಲ್ಲಿಯೂ ಕ್ರಿಮಿನಲ್ ದೂರನ್ನು ರದ್ದುಪಡಿಸಲು ನಿರಾಕರಿಸಿದ ಹೈಕೋರ್ಟ್ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಅವರ ಆದೇಶದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿತ್ತು. ಅದರ ಆಧಾರದ ಮೇಲೆ, ಅವರನ್ನು ಕ್ರಿಮಿನಲ್ ವಿಚಾರಣೆಯಿಂದ ದೂರವಿಟ್ಟು, ಹಿರಿಯ ನ್ಯಾಯಾಧೀಶರೊಂದಿಗೆ ಮಾತ್ರ ಕುಳಿತುಕೊಳ್ಳುವಂತೆ ನಿರ್ದೇಶಿಸಿತ್ತು.
ಈ ನಿರ್ದೇಶನವು ವ್ಯಾಪಕ ಟೀಕೆಗೆ ಗುರಿಯಾದ ಹಿನ್ನೆಲೆಯಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ವಿನಂತಿ ಮೇರೆಗೆ ಪೀಠವು ಮರುಪರಿಶೀಲನೆ ನಡೆಸಿತು. ಹದಿಮೂರು ಹೈಕೋರ್ಟ್ ನ್ಯಾಯಾಧೀಶರೂ ಈ ಕುರಿತು ಅಲಹಾಬಾದ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು, ಸುಪ್ರೀಂ ಕೋರ್ಟ್‌ನ ಹಿಂದಿನ ನಿರ್ದೇಶನ ಜಾರಿಗೊಳಿಸದಂತೆ ಒತ್ತಾಯಿಸಿದ್ದರು.
"ನಮ್ಮ ಉದ್ದೇಶ ನ್ಯಾಯಾಧೀಶರನ್ನು ಮುಜುಗರಕ್ಕೀಡು ಮಾಡುವುದಲ್ಲ, ಅಥವಾ ಅವರ ಗೌರವಕ್ಕೆ ಧಕ್ಕೆ ತರುವುದು ಅಲ್ಲ," ಎಂದು ನ್ಯಾಯಮೂರ್ತಿ ಪರ್ದಿವಾಲಾ ಹೊಸ ಆದೇಶದಲ್ಲಿ ಸ್ಪಷ್ಟಪಡಿಸಿದರು. "ಆದರೆ, ವಿಷಯಗಳು ಮಿತಿಯನ್ನು ದಾಟಿ ನ್ಯಾಯಾಲಯದ ಘನತೆಗೆ ಧಕ್ಕೆ ಬಂದಾಗ, ಸಂವಿಧಾನದ 136ನೇ ವಿಧಿಯಡಿ ಮಧ್ಯಪ್ರವೇಶಿಸುವುದು ಈ ನ್ಯಾಯಾಲಯದ ಕರ್ತವ್ಯ," ಎಂದೂ ಹೇಳಿದರು.
ಪೀಠವು ಹೈಕೋರ್ಟ್‌ಗಳ ಆಡಳಿತಾತ್ಮಕ ಅಧಿಕಾರಗಳಲ್ಲಿ ಹಸ್ತಕ್ಷೇಪ ಮಾಡದೆ, ನ್ಯಾಯಾಂಗದ ಘನತೆಯನ್ನು ಕಾಯ್ದುಕೊಳ್ಳುವುದೇ ತಮ್ಮ ಉದ್ದೇಶ ಎಂದು ತಿಳಿಸಿತು. ಹೈಕೋರ್ಟ್‌ಗಳು ನ್ಯಾಯಾಂಗ ವ್ಯವಸ್ಥೆಯಿಂದ ಪ್ರತ್ಯೇಕವಾಗಿಲ್ಲ, ಅವು ಅದರ ಅವಿಭಾಜ್ಯ ಅಂಗವೆಂದು ಒತ್ತಿ ಹೇಳಿತು.