ಭಾರತದಲ್ಲಿ ಸ್ಮಾರ್ಟ್ ಫೋನ್‌ಗಳನ್ನು ತಯಾರಿಸಬೇಡಿ: ಆ್ಯಪಲ್ ಮೇಲೆ ಡೊನಾಲ್ಡ್ ಟ್ರಂಪ್ ಒತ್ತಡ
ಡೊನಾಲ್ಡ್ ಟ್ರಂಪ್ (Photo: PTI)
ಹೊಸದಿಲ್ಲಿ: ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಿ ಅಮೆರಿಕನ್ನರಿಗೆ ಮಾರಾಟ ಮಾಡುವ ತನ್ನ ವಿಸ್ತರಣಾ ಯೋಜನೆಯನ್ನು ಕೈಬಿಟ್ಟು,ಅಮೆರಿಕದಲ್ಲಿ ನಿರ್ಮಾಣ ಸಾಮರ್ಥ್ಯವನ್ನು ಹೆಚ್ಚಿಸಲು ಗಮನ ಹರಿಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಐಫೋನ್ ತಯಾರಕ ಆ್ಯಪಲ್‌ಗೆ ಸೂಚಿಸಿದ್ದಾರೆ.
ಗುರುವಾರ ದೋಹಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ‘ನಿನ್ನೆ ಟಿಮ್ ಕುಕ್ (ಆ್ಯಪಲ್ ಸಿಇಒ) ಜೊತೆ ನನಗೆ ಸ್ವಲ್ಪ ಸಮಸ್ಯೆ ಎದುರಾಗಿತ್ತು.ನಾನು ನಿಮ್ಮನ್ನು ಚೆನ್ನಾಗಿ ನಡೆಸಿಕೊಂಡಿದ್ದೇನೆ. ಆದರೆ ನೀವು ಈಗ ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಲು ಮುಂದಾಗಿದ್ದೀರಿ ಎಂದು ನಾನು ಕೇಳಿದ್ದೇನೆ. ನೀವು ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವುದನ್ನು ನಾನು ಬಯಸುವುದಿಲ್ಲ ಎಂದು ನಾನು ಅವರಿಗೆ ತಿಳಿಸಿದ್ದೇನೆ’ಎಂದು ಹೇಳಿದರು.
ಟ್ರಂಪ್ ಹೇಳಿಕೆಯಿಂದ ಭಾರತವನ್ನು ಸ್ಮಾರ್ಟ್‌ಫೋನ್‌ಗಳ ಪ್ರಮುಖ ಉತ್ಪಾದಕ ರಾಷ್ಟ್ರವನ್ನಾಗಿ ಮಾಡುವ ಮೋದಿ ಸರಕಾರದ ಘೋಷಿತ ಕಾರ್ಯಸೂಚಿಯ ಮೇಲೆ ಕರಿನೆರಳು ಬಿದ್ದ ಬೆನ್ನಲ್ಲೇ ದಿಲ್ಲಿಯಲ್ಲಿ ಹಿರಿಯ ಸರಕಾರಿ ಅಧಿಕಾರಿಗಳು ಆ್ಯಪಲ್‌ನ ಹೂಡಿಕೆ ಯೋಜನೆಗಳಿಗೆ ಯಾವುದೇ ಹಿನ್ನಡೆಯಾಗಿಲ್ಲ. ಭಾರತದಲ್ಲಿ ತನ್ನ ಹೂಡಿಕೆ ಯೋಜನೆಗಳು ಯಥಾವತ್ತಾಗಿ ಉಳಿದುಕೊಂಡಿವೆ ಮತ್ತು ಭಾರತವನ್ನು ತನ್ನ ಪ್ರಮುಖ ಉತ್ಪಾದನಾ ನೆಲೆಯನ್ನಾಗಿ ಮುಂದುವರಿಸಲು ಉದ್ದೇಶಿಸಿದ್ದೇನೆ ಎಂದು ಆ್ಯಪಲ್ ತಿಳಿಸಿದೆ ಎಂದು ಹೇಳಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಆ್ಯಪಲ್ ಭಾರತೀಯ ಮಾರುಕಟ್ಟೆಗಾಗಿ ಭಾರತದಲ್ಲಿ ಉತ್ಪನ್ನಗಳನ್ನು ತಯಾರಿಸಬಹುದು ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಆದರೆ ಮಾರುಕಟ್ಟೆ ಬಂಡವಾಳೀಕರಣದಲ್ಲಿ ವಿಶ್ವದ ಎರಡನೇ ಅತ್ಯಂತ ದೊಡ್ಡ ಕಂಪನಿಯಾಗಿರುವ ಆ್ಯಪಲ್ ತಾನು ಚೀನಾದಲ್ಲಿ ಅಳವಡಿಸಿಕೊಂಡಿದ್ದ ಮಾದರಿಯನ್ನು ಭಾರತದಲ್ಲಿ ಅನುಸರಿಸಿದರೆ ಅದು ತನ್ನ ಆಡಳಿತಕ್ಕೆ ಅಸಮಾಧಾನವನ್ನುಂಟು ಮಾಡಲಿದೆ ಎನ್ನುವುದು ಟ್ರಂಪ್ ಅವರ ಸ್ಪಷ್ಟ ಸಂದೇಶವಾಗಿದೆ.
‘ನೀವು(ಕುಕ್) ಚೀನಾದಲ್ಲಿ ನಿರ್ಮಿಸಿರುವ ಎಲ್ಲ ಸ್ಥಾವರಗಳನ್ನು ನಾವು ವರ್ಷಗಳಿಂದಲೂ ಸಹಿಸಿಕೊಂಡಿದ್ದೇವೆ. ಭಾರತದಲ್ಲಿ ಉತ್ಪನ್ನಗಳ ತಯಾರಿಕೆಯಲ್ಲಿ ನಮಗೆ ಆಸಕ್ತಿಯಿಲ್ಲ,ಭಾರತ ತನ್ನನ್ನು ತಾನು ನೋಡಿಕೊಳ್ಳಬಲ್ಲದು’ ಎಂದೂ ಟ್ರಂಪ್ ಹೇಳಿದರು.
ಈ ವರ್ಷದ ಆರಂಭದಲ್ಲಿ ಭಾರತ ಸೇರಿದಂತೆ ೬೦ ದೇಶಗಳ ಮೇಲೆ ಕಠಿಣ ಪ್ರತಿಸುಂಕವನ್ನು ಹೇರುವ ತನ್ನ ಇಂಗಿತವನ್ನು ಟ್ರಂಪ್ ವ್ಯಕ್ತಪಡಿಸಿದ ಬಳಿಕ ಆ್ಯಪಲ್ ಐದು ವಿಮಾನಗಳ ಲೋಡ್‌ನಷ್ಟು ಐಫೋನ್‌ಗಳನ್ನು ಭಾರತದಿಂದ ರವಾನಿಸಿತ್ತು. ಪ್ರತಿಸುಂಕ ಜಾರಿಗೆ ವಿರಾಮವನ್ನು ಘೋಷಿಸಿದ ಬಳಿಕ ಭೀತಿ ನಿವಾರಣೆಯಾಗಿದೆ,ಆದರೆ ಟ್ರಂಪ್ ಇತ್ತೀಚಿನ ಹೇಳಿಕೆಗಳು ಭಾರತದಲ್ಲಿ ತನ್ನ ಯೋಜನೆಗಳಿಗೆ ಸಂಬಂಧಿಸಿದಂತೆ ಆ್ಯಪಲ್‌ಗೆ ಹೊಸ ಸವಾಲೊಡ್ಡಿವೆ.