ತಮಿಳುನಾಡು : ಲಾಕಪ್ ಡೆತ್ ಖಂಡಿಸಿ ಟಿವಿಕೆ ಮುಖ್ಯಸ್ಥ ವಿಜಯ್ ನೇತೃತ್ವದಲ್ಲಿ ಪ್ರತಿಭಟನೆ
PC : X \ @Ahmedshabbir20
ಚೆನ್ನೈ: ಕಳೆದ ನಾಲ್ಕು ವರ್ಷಗಳ ಡಿಎಂಕೆ ಆಡಳಿತದಲ್ಲಿ ತಮಿಳುನಾಡಿನಲ್ಲಿ ನಡೆದ ಕಸ್ಟಡಿ ಸಾವಿನ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಟಿವಿಕೆ ಮುಖ್ಯಸ್ಥ, ನಟ ವಿಜಯ್ ತಮಿಳುನಾಡಿನ ಡಿಎಂಕೆ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಚೆನ್ನೈನ ಸ್ವಾಮಿ ಶಿವಾನಂದ ಸಾಲೈನಲ್ಲಿ ಪ್ರತಿಭಟನಾ ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದ ನಟ ವಿಜಯ್, ಕಳೆದ ನಾಲ್ಕು ವರ್ಷಗಳ ಡಿಎಂಕೆ ಸರಕಾರದ ಅವಧಿಯಲ್ಲಿ ನಡೆದಿರುವ ಲಾಕಪ್ ಡೆತ್‌ಗಳ ಸಂತ್ರಸ್ತರಿಗೆ ನ್ಯಾಯ ದೊರೆಯಬೇಕು. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮೃತ ಅಜಿತ್ ಕುಮಾರ್ ಕುಟುಂಬದ ಕ್ಷಮೆ ಕೇಳಿದರೆ ಮಾತ್ರ ಸಾಲದು, ನಿಮ್ಮ ಅವಧಿಯಲ್ಲಿ ನಡೆದ ಇನ್ನುಳಿದ 24 ಮಂದಿಯ ಲಾಕಪ್ ಡೆತ್ ಕತೆಯೇನು? ನೀವೇಕೆ ಅವರೆಲ್ಲರ ಕುಟುಂಬಸ್ಥರ ಕ್ಷಮೆ ಕೋರಿಲ್ಲ? ನೀವೇಕೆ ಅವರ ಕುಟುಂಬಸ್ಥರಿಗೆ ಪರಿಹಾರ ವಿತರಿಸಿಲ್ಲ? ಎಂದು ಪ್ರಶ್ನಿಸಿದರು.
ಅಜಿತ್ ಕುಮಾರ್ ಲಾಕಪ್ ಡೆತ್ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ರಾಜ್ಯ ಸರಕಾರದ ಕ್ರಮವನ್ನು ಪ್ರಶ್ನಿಸಿದ ವಿಜಯ್, ಸತಂಕುಳಂ ಲಾಕಪ್ ಡೆತ್ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದಾಗ, ನೀವು ಅದನ್ನು ತಮಿಳುನಾಡು ಪೊಲೀಸರಿಗಾದ ಅವಮಾನವೆಂದು ಟೀಕಿಸಿದ್ದಿರಿ. ಈಗ ನೀವೇಕೆ ಅದನ್ನೇ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.