ಟಿವಿಕೆ ರ‍್ಯಾಲಿಯಲ್ಲಿ ಕಾಲ್ತುಳಿತ ಪ್ರಕರಣ | ವಿಜಯ್ ಜನರ ಕೂಗನ್ನು ನಿರ್ಲಕ್ಷಿಸಿದ್ದರು : ಪ್ರತ್ಯಕ್ಷದರ್ಶಿಗಳಿಂದ ಆರೋಪ
ಟಿವಿಕೆ ಮುಖ್ಯಸ್ಥ ವಿಜಯ | PTI
ಚೆನ್ನೈ,ಸೆ.28: ತಮಿಳುನಾಡಿನ ಕರೂರಿನಲ್ಲಿ ನಟ-ರಾಜಕಾರಣಿ ಮತ್ತು ಟಿವಿಕೆ ಮುಖ್ಯಸ್ಥ ವಿಜಯ ಅವರ ರ‍್ಯಾಲಿಯ ಸಂದರ್ಭದಲ್ಲಿ 39 ಜನರನ್ನು ಬಲಿ ಪಡೆದ ಕಾಲ್ತುಳಿತಕ್ಕೆ ವಿದ್ಯುತ್ ವ್ಯತ್ಯಯ, ಹಠಾತ್ ಹೆಚ್ಚಿದ ಜನಸಂದಣಿ ಮತ್ತು ಇಕ್ಕಟ್ಟಿನ ಸ್ಥಳ ಕಾರಣವಾಗಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ವಿಜಯ ಶನಿವಾರ ಸಂಜೆ ಏಳು ಗಂಟೆಗಳಷ್ಟು ವಿಳಂಬವಾಗಿ ರ‍್ಯಾಲಿ ಸ್ಥಳವನ್ನು ತಲುಪಿದ್ದ ಸಂದರ್ಭ ಈ ದುರಂತ ಸಂಭವಿಸಿತ್ತು. ವಿಜಯ ದರ್ಶನಕ್ಕಾಗಿ ಸಾವಿರಾರು ಜನರು ಅಲ್ಲಿ ಕಾದು ನಿಂತಿದ್ದರು.
ವಿಜಯ ಸಂಜೆ ಏಳು ಗಂಟೆಯ ಸುಮಾರಿಗೆ ರ‍್ಯಾಲಿ ಸ್ಥಳಕ್ಕೆ ಆಗಮಿಸುವವರೆಗೂ ಜನಸಂದಣಿ ಹೆಚ್ಚುತ್ತಲೇ ಇತ್ತು ಮತ್ತು ವಿಜಯ ತನ್ನ ಪ್ರಚಾರ ವಾಹನದಲ್ಲಿ ಬಂದಾಗ ಇನ್ನಷ್ಟು ಜನರು ಅಲ್ಲಿ ಸೇರಿದ್ದರು. ಈ ವೇಳೆ ತಮ್ಮ ನೆಚ್ಚಿನ ನಟನನ್ನು ನೋಡಲು ಅನೇಕ ಜನರು ಮರಗಳು,ಕಟ್ಟಡಗಳ ಛಾವಣಿಗಳು ಮತ್ತು ವಿದ್ಯುತ್ ಕಂಬಗಳನ್ನು ಹತ್ತಿದ್ದರು. ಇದರಿಂದಾಗಿ ವಿದ್ಯುತ್ ಆಘಾತದ ಪ್ರಕರಣಗಳನ್ನು ತಪ್ಪಿಸಲು ಅಧಿಕಾರಿಗಳು ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸುವಂತಾಗಿತ್ತು ಎಂದು ಪ್ರತ್ಯಕ್ಷದರ್ಶಿಯೋರ್ವರು ತಿಳಿಸಿದರು.
ಪ್ರತ್ಯಕ್ಷದರ್ಶಿಯ ಪ್ರಕಾರ ವಿಜಯ್ ಆಗಮಿಸಿದಾಗ ಜನರು ಪರಸ್ಪರ ತಳ್ಳಾಡಲು ಆರಂಭಿಸಿದ್ದರು ಮತ್ತು ವಿಜಯ್ ಗಮನವನ್ನು ಸೆಳೆಯಲು ಪ್ರಚಾರ ವಾಹನದತ್ತ ಚಪ್ಪಲಿಗಳನ್ನು ಎಸೆದಿದ್ದರು.
ಮರಗಳು ಮತ್ತು ವಿದ್ಯುತ್‌ಕಂಬಗಳನ್ನು ಹತ್ತಿದ್ದ ಕೆಲವರು ಕೆಳಕ್ಕೆ ಬಿದ್ದು ಚರಂಡಿಗಳಲ್ಲಿ ಸಿಕ್ಕಿಕೊಂಡಿದ್ದರು. ಕೆಲವರು ಮೂರ್ಛೆ ಹೋಗಿದ್ದರು. ಅವರಿಗೆ ನೆರವಾಗಲು ಆ್ಯಂಬುಲೆನ್ಸ್‌ಗಳು ಧಾವಿಸಿದ್ದವಾದರೂ ಭಾರೀ ಜನಸಂದಣಿಯ ನಡುವಿನಿಂದ ಸಾಗಲು ಅವುಗಳಿಗೆ ಸಾಧ್ಯವಾಗಿರಲಿಲ್ಲ ಎಂದು ಪ್ರತ್ಯಕ್ಷದರ್ಶಿ ತಿಳಿಸಿದರು.
ನಂತರ ಪೋಲಿಸರು ಗುಂಪನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದರು ಎಂದು ತಿಳಿಸಿದ ಇನ್ನೋರ್ವ ಪ್ರತ್ಯಕ್ಷದರ್ಶಿ, ವಿಜಯ್ ರಸ್ತೆಯಲ್ಲಿ ಸಾಗುತ್ತಿದ್ದಾಗ ಕೇವಲ ತನ್ನ ಕೈಗಳನ್ನು ಬೀಸಿದ್ದರೂ ಜನಸಮೂಹ ಅವರನ್ನು ಹಿಂಬಾಲಿಸುತ್ತಿರಲಿಲ್ಲ. ಜನರು ನೆರವಿಗಾಗಿ ಕೂಗುತ್ತಿದ್ದರು, ಆದರೆ ವಿಜಯ ಅವರ ಕೂಗನ್ನು ನಿರ್ಲಕ್ಷಿಸಿದ್ದರು ಎಂದು ಹೇಳಿದರು.
20 ಲ.ರೂ.ಪರಿಹಾರ ಘೋಷಿಸಿದ ವಿಜಯ್
ಕಾಲ್ತುಳಿತದಲ್ಲಿ ಮೃತಪಟ್ಟಿರುವ 39 ಜನರ ಕುಟುಂಬಗಳಿಗೆ ತಲಾ 20 ಲಕ್ಷ ರೂ.ಗಳ ಪರಿಹಾರವನ್ನು ರವಿವಾರ ಘೋಷಿಸಿರುವ ವಿಜಯ್, ಗಾಯಗೊಂಡಿರುವ ಸುಮಾರು ನೂರು ಜನರಿಗೆ ತನ್ನ ಪಕ್ಷವು ತಲಾ ಎರಡು ಲಕ್ಷ ರೂ.ಗಳ ಪರಿಹಾರವನ್ನು ನೀಡಲಿದೆ ಎಂದು ತಿಳಿಸಿದ್ದಾರೆ.
ಭೀಕರ ಕಾಲ್ತುಳಿತದ ಬಳಿಕ ಶನಿವಾರ ತಡರಾತ್ರಿ ಘಟನೆಯ ಬಗ್ಗೆ ಎಕ್ಸ್‌ನಲ್ಲಿ ಸಂತಾಪ ವ್ಯಕ್ತಪಡಿಸಿದ್ದ ವಿಜಯ್ ,‘ನನ್ನ ಹೃದಯ ಛಿದ್ರಗೊಂಡಿದೆ. ಪದಗಳಲ್ಲಿ ವ್ಯಕ್ತಪಡಿಸಲಾಗದ ಅಸಹನೀಯ ನೋವು ಮತ್ತು ದುಃಖದಲ್ಲಿ ನಾನು ನರಳುತ್ತಿದ್ದೇನೆ. ಕರೂರಿನಲ್ಲಿ ಪ್ರಾಣಗಳನ್ನು ಕಳೆದುಕೊಂಡ ನನ್ನ ಪ್ರೀತಿಯ ಸೋದರರು ಮತ್ತು ಸೋದರಿಯರ ಕುಟುಂಬಗಳಿಗೆ ನನ್ನ ಗಾಢ ಸಂತಾಪಗಳು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದರು.