×
Ad

ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಅನುತ್ತೀರ್ಣ : ಭಾರತದ ಓಟಗಾರ್ತಿ ಟ್ವಿಂಕಲ್ ಚೌಧರಿ ತಾತ್ಕಾಲಿಕ ಅಮಾನತು

Update: 2025-06-27 21:20 IST

ಟ್ವಿಂಕಲ್ ಚೌಧರಿ | PC : X 

ಹೊಸದಿಲ್ಲಿ ನಿಷೇಧಿತ ಅನಾಬೋಲಿಕ್ ಸ್ಟೀರಾಯ್ಡ್ ಸೇವಿಸಿರುವುದು ದೃಢಪಟ್ಟ ನಂತರ ಹಲವು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾಗಿರುವ ಓಟಗಾರ್ತಿ ಟ್ವಿಂಕಲ್ ಚೌಧರಿ ಅವರನ್ನು ಅತ್ಲೆಟಿಕ್ಸ್ ಇಂಟೆಗ್ರಿಟಿ ಯುನಿಟ್(ಎಐಯು)ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.

ಜಲಂಧರ್‌ನ 28ರ ವಯಸ್ಸಿನ ಮಧ್ಯಮ-ಅಂತರದ ಓಟಗಾರ್ತಿ ಟ್ವಿಂಕಲ್ ಅವರು ಇತ್ತೀಚೆಗೆ ಉತ್ತರಾಖಂಡದಲ್ಲಿ ನಡೆದಿದ್ದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಹಿಳೆಯರ 4-400 ಮೀ.ರಿಲೇಯಲ್ಲಿ ಚಿನ್ನ, 800 ಮೀ. ಓಟದಲ್ಲಿ ಬೆಳ್ಳಿ ಹಾಗೂ ಮಿಕ್ಸೆಡ್ 4-400 ಮೀ. ರಿಲೇಯಲ್ಲಿ ಕಂಚಿನ ಪದಕ ಜಯಿಸಿದ್ದರು. ಕೊಚ್ಚಿಯಲ್ಲಿ ನಡೆದಿದ್ದ ನ್ಯಾಶನಲ್ ಫೆಡರೇಶನ್ ಸೀನಿಯರ್ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 800 ಮೀ.ಓಟದಲ್ಲಿ 2:00.71 ಸೆಕೆಂಡ್‌ನಲ್ಲಿ ಗುರಿ ತಲುಪಿ ನೂತನ ಕೂಟ ದಾಖಲೆ ನಿರ್ಮಿಸಿದ್ದರು.

ಈ ತಿಂಗಳಾರಂಭದಲ್ಲಿ ತೈವಾನ್ ಓಪನ್‌ನಲ್ಲಿ 800 ಮೀ. ಓಟದಲ್ಲಿ ಬೆಳ್ಳಿ ಪದಕ ಜಯಿಸಿದ್ದ ಟ್ವಿಂಕಲ್ ಚೌಧರಿ, ಮೇನಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 4ನೇ ಸ್ಥಾನ ಪಡೆದಿದ್ದರು.

ಎಐಯು, ಟ್ವಿಂಕಲ್ ಚೌಧರಿಗೆ ‘ಆರೋಪಕ್ಕೆ ಸಂಬಂಧಿಸಿ ನೋಟಿಸ್’ ನೀಡಿದ್ದು, ಈಗ ಅವರು ವಿಚಾರಣೆಯ ವೇಳೆಗೆ ತಮ್ಮ ವಾದವನ್ನು ಮಂಡಿಸುವ ಅವಕಾಶವನ್ನು ಹೊಂದಿದ್ದಾರೆ.

2023ರಲ್ಲಿ 213 ಪಾಸಿಟಿವ್ ಪ್ರಕರಣಗಳೊಂದಿಗೆ ಡೋಪಿಂಗ್ ಪಟ್ಟಿಯಲ್ಲಿ ಭಾರತವು ಅಗ್ರ ಸ್ಥಾನದಲ್ಲಿದೆ.

ಚೌಧರಿ ಅವರ ಅಮಾನತು ಕಳಪೆ ಡೋಪಿಂಗ್ ದಾಖಲೆಯೊಂದಿಗೆ ಹೋರಾಡುತ್ತಿರುವ ಭಾರತೀಯ ಅತ್ಲೆಟಿಕ್ಸ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ಕಳೆದ ತಿಂಗಳಷ್ಟೇ, ಓಟಗಾರ್ತಿ ಸ್ನೇಹಾ ಕೊಲ್ಲೇರಿ ಅವರನ್ನು ಸ್ಟೆರಾಯ್ಡ್ ಸೇವಿಸಿದ್ದಕ್ಕಾಗಿ ಉದ್ದೀಪನಾ ಮದ್ದು ಸೇವನೆಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಂತರ ಅಮಾನತುಗೊಳಿಸಲಾಗಿದೆ.

2023ರ ಡೋಪಿಂಗ್ ಪಟ್ಟಿಯಲ್ಲಿ ಭಾರತಕ್ಕೆ ಅಗ್ರ ಸ್ಥಾನ!

2023ರ ಡೋಪಿಂಗ್ ಪಟ್ಟಿಯಲ್ಲಿ ಭಾರತವು 5,000ಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಿರುವ ದೇಶಗಳಲ್ಲಿ ಅಗ್ರ ಸ್ಥಾನದಲ್ಲಿದೆ. ಪ್ರತಿಕೂಲ ಫಲಿತಾಂಶಗಳ ದರವು ಶೇ.3.8ರಷ್ಟಿದೆ. ಜಾಗತಿಕವಾಗಿ ನಡೆಸಲಾದ 2,04,809 ಪರೀಕ್ಷೆಗಳಲ್ಲಿ ಭಾರತವು 214 ಪಾಸಿಟಿವ್ ಕೇಸ್‌ಗಳನ್ನು ಹೊಂದಿದೆ.

ಕ್ರೀಡಾ ಸಚಿವಾಲಯವು ಜಾಗೃತಿ ಅಭಿಯಾನಗಳ ಮೂಲಕ ಡೋಪಿಂಗ್ ವಿರೋಧಿ ಪ್ರಯತ್ನಗಳನ್ನು ತೀವ್ರಗೊಳಿಸುವುದಾಗಿ ಪ್ರತಿಜ್ಞೆ ಮಾಡಿದೆ. ಸರಕಾರದ ಹಸ್ತಕ್ಷೇಪದ ಕುರಿತು ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ(ವಾಡಾ)ಎತ್ತಿದ ಕಳವಳಗಳನ್ನು ಪರಿಹರಿಸಿದ ನಂತರ, ತಿದ್ದುಪಡಿ ಮಾಡಲಾದ ರಾಷ್ಟ್ರಿಯ ಡೋಪಿಂಗ್ ವಿರೋಧಿ ಕಾಯ್ದೆಯನ್ನು ಶೀಘ್ರದಲ್ಲೇ ಸಂಸತ್ತಿನಲ್ಲಿ ಪರಿಚಯಿಸುವ ನಿರೀಕ್ಷೆ ಇದೆ.

ಅತ್ಲೆಟಿಕ್ಸ್‌ನಲ್ಲಿ ಜಾಗತಿಕವಾಗಿ ಡೋಪಿಂಗ್ ವಿರೋಧಿ ನಿಯಮಗಳನ್ನು ಅತ್ಲೆಟಿಕ್ಸ್ ಇಂಟೆಗ್ರಿಟಿ ಯುನಿಟ್‌ಜಾರಿಗೊಳಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News