ಪುಣೆಯಲ್ಲಿ ತರಬೇತಿ ವಿಮಾನ ಪತನ; ಕಳೆದ ನಾಲ್ಕು ದಿನಗಳಲ್ಲಿ ಎರಡನೆಯ ಘಟನೆ
Photo: PTI
ಪುಣೆ: ಖಾಸಗಿ ವಿಮಾನ ಯಾನ ಅಕಾಡೆಮಿಗೆ ಸೇರಿರುವ ತರಬೇತಿ ವಿಮಾನವೊಂದು ಪತನಗೊಂಡು, ತರಬೇತಿ ನಿರತ ಪೈಲಟ್ ಹಾಗೂ ತರಬೇತುದಾರರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಗ್ರಾಮವೊಂದರ ಬಳಿ ರವಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ತರಬೇತಿ ವಿಮಾನವು ಬಾರಾಮತಿ ತಾಲ್ಲೂಕಿನ ಗೋಜುಬಾವಿ ಗ್ರಾಮದ ಬಳಿ ಬೆಳಗ್ಗೆ ಸುಮಾರು 8 ಗಂಟೆ ಸಮಯದಲ್ಲಿ ಪತನಗೊಂಡಿತು ಎಂದು ಅವರು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಾರಾಮತಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಪ್ರಭಾಕರ್ ಮೋರೆ, “ರೆಡ್ ಬರ್ಡ್ ವಿಮಾನ ತರಬೇತಿ ಅಕಾಡೆಮಿಗೆ ಸೇರಿರುವ ತರಬೇತಿ ವಿಮಾನವೊಂದು ಗೋಜುಬಾವಿ ಗ್ರಾಮದ ಬಳಿ ಪತನಗೊಂಡಿದೆ. ಪತನದ ಘಟನೆಯಲ್ಲಿ ಓರ್ವ ತರಬೇತಿ ನಿರತ ಪೈಲಟ್ ಹಾಗೂ ಓರ್ವ ತರಬೇತಿದಾರರು ಗಾಯಗೊಂಡಿದ್ದಾರೆ. ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ” ಎಂದು ತಿಳಿಸಿದ್ದಾರೆ.
“ವಿಮಾನ ಪತನಕ್ಕೆ ಕಾರಣವೇನೆಂದು ಈವರೆಗೆ ತಿಳಿದು ಬಂದಿಲ್ಲ. ಈ ಘಟನೆಯ ಕುರಿತು ನಾವು ತನಿಖೆ ನಡೆಸಲಿದ್ದೇವೆ” ಎಂದು ಅವರು ಹೇಳಿದ್ದಾರೆ.
ಖಾಸಗಿ ವಿಮಾನ ತರಬೇತಿ ಅಕಾಡೆಮಿಗೆ ಸೇರಿದ ತರಬೇತಿ ವಿಮಾನಗಳು ಕಳೆದ ನಾಲ್ಕು ದಿನಗಳಲ್ಲಿ ಪತನವಾಗುತ್ತಿರುವುದು ಇದು ಎರಡನೆಯ ಬಾರಿಯಾಗಿದೆ.