×
Ad

ಏರ್ ಇಂಡಿಯಾ ವಿಮಾನ ದುರಂತ | ಮಡಿದ ವೈದ್ಯಕೀಯ ವಿದ್ಯಾರ್ಥಿಗಳ ಕುಟುಂಬಕ್ಕೆ ಯುಎಇ ಮೂಲದ ವೈದ್ಯ ಡಾ. ಶಂಶೀರ್ ವಯಲಿಲ್ ತಲಾ 1 ಕೋಟಿ ರೂ. ನೆರವು ಘೋಷಣೆ

Update: 2025-06-17 22:25 IST

Photo | mathrubhumi

ಅಬುಧಾಬಿ: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರ ಕುಟುಂಬಗಳಿಗೆ ಯುಎಇ ಮೂಲದ ವೈದ್ಯರು ಮತ್ತು ಸಮಾಜಸೇವಕರಾದ ಡಾ. ಶಂಶೀರ್ ವಯಲಿಲ್ ಒಟ್ಟು 6 ಕೋಟಿ ರೂ. ನೆರವು ಘೋಷಿಸಿದ್ದಾರೆ.

ಜೂನ್ 12ರಂದು ಬೋಯಿಂಗ್ 787 ವಿಮಾನವು ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ಗೆ ಅಪ್ಪಳಿಸಿತ್ತು. ಘಟನೆಯಲ್ಲಿ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದರು.

ರಾಜಸ್ಥಾನದ ಬಾರ್ಮರ್‌ನ ಜೈಪ್ರಕಾಶ್ ಚೌಧರಿ, ರಾಜಸ್ಥಾನದ ಗಂಗಾನಗರದ ಮಾನವ್ ಭಾದು, ಮಧ್ಯಪ್ರದೇಶದ ಗ್ವಾಲಿಯರ್‌ನ ಆರ್ಯನ್ ರಜಪೂತ್ ಮತ್ತು ಗುಜರಾತ್‌ನ ಭಾವನಗರದ ರಾಕೇಶ್ ದಿಯೋರಾ ಮೃತಪಟ್ಟ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾರೆ.

ಡಾ.ಶಂಶೀರ್ ವಯಲಿಲ್ ಅವರು ಬುರ್ಜೀಲ್ ಹೋಲ್ಡಿಂಗ್ಸ್‌ ನ ಸ್ಥಾಪಕರು, ವಿಪಿಎಸ್ ಹೆಲ್ತ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ವಿಮಾನ ದುರಂತ ಘಟನೆ ನನಗೆ ತೀವ್ರವಾಗಿ ಆಘಾತವನ್ನುಂಟುಮಾಡಿದೆ ಎಂದು ಅವರು ಹೇಳಿದ್ದಾರೆ.

"ನಾನು ಹಾಸ್ಟೆಲ್‌ನ ದೃಶ್ಯಗಳನ್ನು ನೋಡಿದೆ. ಅದು ನಿಜವಾಗಿಯೂ ನನ್ನನ್ನು ಬೆಚ್ಚಿಬೀಳಿಸಿತು. ನಾನು ಒಮ್ಮೆ ಮನೆ ಎಂದು ಕರೆದ ಸ್ಥಳಗಳು, ಕಾರಿಡಾರ್‌ಗಳು, ಹಾಸಿಗೆಗಳು, ನಗು ಎಲ್ಲವೂ ನನ್ನ ನೆನಪಿಗೆ ಬಂತು. ವಿಮಾನವು ಹಾಸ್ಟೆಲ್‌ ಗೆ ಅಪ್ಪಳಿಸುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆ ವಿದ್ಯಾರ್ಥಿಗಳು ಉಪನ್ಯಾಸಕರು, ರೋಗಿಗಳ ಬಗ್ಗೆ ಯೋಚಿಸುತ್ತಾ ದಿನವನ್ನು ಪ್ರಾರಂಭಿಸಿರಬಹದು. ಅವರ ಜೀವನವು ಯಾರೂ ಊಹಿಸಲಾಗದ ರೀತಿಯಲ್ಲಿ ಕೊನೆಗೊಂಡಿತು”, ಎಂದು ಅವರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ಮೃತ ನಾಲ್ವರು ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ. ಹಾಗೂ ಗಂಭೀರವಾಗಿ ಗಾಯಗೊಂಡ ಐವರು ವಿದ್ಯಾರ್ಥಿಗಳಿಗೆ ತಲಾ 20 ಲಕ್ಷ ರೂ. ಮತ್ತು ಪ್ರೀತಿಪಾತ್ರರನ್ನು ಕಳೆದುಕೊಂಡ ವೈದ್ಯರ ಕುಟುಂಬಗಳಿಗೆ ತಲಾ 20 ಲಕ್ಷ ರೂ. ನೀಡುವುದಾಗಿ ಡಾ. ಶಂಶೀರ್ ವಯಲಿಲ್ ಘೋಷಿಸಿದ್ದಾರೆ.

ಡಾ.ಶಂಶೀರ್ ಇಂತಹ ಸನ್ನಿವೇಶಗಳಲ್ಲಿ ಸ್ಪಂದಿಸುತ್ತಿರುವುದು ಇದೇ ಮೊದಲಲ್ಲ. 2010ರಲ್ಲಿ ಮಂಗಳೂರು ವಿಮಾನ ಅಪಘಾತದಲ್ಲಿ ಮೃತಪಟ್ಟ ಮಧ್ಯಪ್ರಾಚ್ಯದ ವೈದ್ಯಕೀಯ ಸಿಬ್ಬಂದಿಯ ಕುಟುಂಬಸ್ಥರಿಗೆ ಆರ್ಥಿಕ ನೆರವು ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News