×
Ad

2020ರ ದಿಲ್ಲಿ ಗಲಭೆಗಳಿಗೂ ನನಗೂ ಸಂಬಂಧ ಕಲ್ಪಿಸುವ ಯಾವುದೇ ಪುರಾವೆಗಳು ಇಲ್ಲ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಉಮರ್ ಖಾಲಿದ್

Update: 2025-10-31 21:52 IST

ಉಮರ್ ಖಾಲಿದ್ | Photo Credit : PTI 

ಹೊಸದಿಲ್ಲಿ, ಅ. 31: ದಿಲ್ಲಿಯಲ್ಲಿ 2020 ಫೆಬ್ರವರಿಯಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿದ ಯುಎಪಿಎ ಪ್ರಕರಣದಲ್ಲಿ ಜಾಮೀನು ಕೋರಿರುವ ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್, ಈ ಗಲಭೆಗೂ ತನಗೂ ನಂಟು ಕಲ್ಪಿಸಲು ಯಾವುದೇ ಪುರಾವೆ ಇಲ್ಲ ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ ಗೆ ತಿಳಿಸಿದ್ದಾರೆ.

ಉಮರ್ ಖಾಲಿದ್ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, 2020ರ ದಿಲ್ಲಿ ಗಲಭೆಗಳಿಗೆ ಸಂಬಂಧಿಸಿದ ಯಾವುದೇ ನಿಧಿ, ಶಸ್ತ್ರಾಸ್ತ್ರ ಅಥವಾ ಯಾವುದೇ ಭೌತಿಕ ಪುರಾವೆಗಳು ಅವರಲ್ಲಿ ಪತ್ತೆಯಾಗಿಲ್ಲ ಎಂದು ನ್ಯಾಯಮೂರ್ತಿಗಳಾದ ಅರವಿಂದ್‌ ಕುಮಾರ್ ಹಾಗೂ ಎನ್.ವಿ. ಅಂಜಾರಿಯಾ ಅವರ ಪೀಠಕ್ಕೆ ತಿಳಿಸಿದರು.

‘‘751 ಎಫ್‌ಐಆರ್ ದಾಖಲಾಗಿವೆ. ಉಮರ್ ಖಾಲಿದ್ ಅವರ ವಿರುದ್ಧ 1 ಎಫ್‌ಐಆರ್ ಮಾತ್ರ ದಾಖಲಾಗಿದೆ. ಇದನ್ನೂ ಪಿತೂರಿ ಎಂದು ಕರೆದರೆ, ಅದು ಆಶ್ಚರ್ಯಕರ’’ಎಂದು ಕಪಿಲ್ ಸಿಬಲ್ ಪ್ರತಿಪಾದಿಸಿದ್ದಾರೆ.

‘‘ಉಮರ್ ಖಾಲಿದ್ ಗಲಭೆಗಳಿಗೆ ಪಿತೂರಿ ನಡೆಸಿದ್ದರೆ, ಅವರು ದಿಲ್ಲಿಯಲ್ಲಿ ಇರುತ್ತಿದ್ದರು. ಆದರೆ, ಗಲಭೆ ನಡೆದ ದಿನಗಳಲ್ಲಿ ಅವರು ದಿಲ್ಲಿಯಲ್ಲಿ ಇರಲಿಲ್ಲ. ಅವರಿಗೂ ಹಿಂಸಾಚಾರಕ್ಕೂ ಸಂಬಂಧ ಕಲ್ಪಿಸಲು ಅವರಲ್ಲಿ ಹಣ, ಶಸ್ತ್ರಾಸ್ತ್ರ, ಭೌತಿಕ ಸಾಕ್ಷ್ಯಗಳು ಇದುವರೆಗೆ ಪತ್ತೆಯಾಗಿಲ್ಲ’’ ಎಂದು ಸಿಬಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಯಾವುದೇ ಪ್ರತ್ಯಕ್ಷದರ್ಶಿಯ ಹೇಳಿಕೆ ಅರ್ಜಿದಾರರನ್ನು ಯಾವುದೇ ಹಿಂಸಾಚಾರದೊಂದಿಗೆ ನಂಟು ಕಲ್ಪಿಸುವುದಿಲ್ಲ ಎಂದು ಅವರು ಗಮನ ಸೆಳೆದಿದ್ದಾರೆ.

ಸಮಾನತೆಯ ಆಧಾರದಲ್ಲಿ ಉಮರ್ ಖಾಲಿದ್ ಜಾಮೀನು ಪಡೆಯಲು ಅರ್ಹರು ಎಂದು ಕಪಿಲ್ ಸಿಬಲ್ ಪ್ರತಿಪಾದಿಸಿದ್ದಾರೆ. ಅಲ್ಲದೆ, ಉಮರ್ ಖಾಲಿದ್ ಅವರ ಸಹ ಸಾಮಾಜಿಕ ಹೋರಾಟಗಾರರಾದ ನಟಾಶಾ ನರ್ವಾಲ್, ದೇವಾಂಗನ ಕಲೀಟಾ ಹಾಗೂ ಆಸಿಫ್ ಇಕ್ಬಾಲ್ ತನ್ಹಾ ಅವರಿಗೆ 2021 ಜೂನ್‌ನಲ್ಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವ ಬಗ್ಗೆ ಕಪಿಲ್ ಸಿಬಲ್ ಗಮನ ಸೆಳೆದಿದ್ದಾರೆ.

ದಿಲ್ಲಿ ಉಚ್ಚ ನ್ಯಾಯಾಲಯ ಉಮರ್ ಖಾಲಿದ್ ಅವರಿಗೆ ಜಾಮೀನು ನಿರಾಕರಿಸಿದೆ. ಉಮರ್ ಖಾಲಿದ್ 2020 ಫೆಬ್ರವರಿ 17ರಂದು ಅಮರಾವತಿಯಲ್ಲಿ ಮಾಡಿದ ಭಾಷಣ ‘‘ಪ್ರಚೋದನಕಾರಿ’’ ಎಂದು ಅದು ಹೇಳಿದೆ. ಆ ಭಾಷಣ ಯುಟ್ಯೂಬ್‌ ನಲ್ಲಿ ಲಭ್ಯವಿದೆ. ಇದು ಗಾಂಧಿ ಸಿದ್ಧಾಂತದ ಕುರಿತು ಉಮರ್ ಖಾಲಿದ್ ಮಾಡಿದ ಸಾರ್ವಜನಿಕ ಭಾಷಣ ಎಂದು ಸಿಬಲ್ ಪ್ರತಿಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News