×
Ad

"ಪೂರ್ವಾಗ್ರಹ ಪೀಡಿತ ತಪ್ಪು ವ್ಯಾಖ್ಯಾನ”: ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಕುರಿತ ಅಮಿತ್ ಶಾ ಹೇಳಿಕೆಯನ್ನು ಖಂಡಿಸಿದ ನಿವೃತ್ತ ನ್ಯಾಯಾಧೀಶರು

Update: 2025-08-25 16:58 IST

ಅಮಿತ್ ಶಾ / ಬಿ ಸುದರ್ಶನ್ ರೆಡ್ಡಿ (Photo: PTI)

ಹೊಸದಿಲ್ಲಿ: ವಿರೋಧ ಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಮಾಜಿ ನ್ಯಾಯಮೂರ್ತಿ ಬಿ ಸುದರ್ಶನ್ ರೆಡ್ಡಿ ಕುರಿತ ಅಮಿತ್ ಶಾ ಅವರ ಹೇಳಿಕೆಗೆ "ದುರದೃಷ್ಟಕರ ಮತ್ತು ಪೂರ್ವಾಗ್ರಹ ಪೀಡಿತ ತಪ್ಪು ವ್ಯಾಖ್ಯಾನ" ಎಂದು ನಿವೃತ್ತ ನ್ಯಾಯಾಧೀಶರ ಗುಂಪು ಜಂಟಿ ಪತ್ರಿಕಾ ಪ್ರಕಟನೆಯಲ್ಲಿ ಟೀಕಿಸಿದೆ.

ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿಗಳು ಸೇರಿದಂತೆ 18 ನಿವೃತ್ತ ನ್ಯಾಯಾಧೀಶರ ಗುಂಪು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿರೋಧ ಪಕ್ಷದ ಉಪರಾಷ್ಟ್ರಪತಿ ಅಭ್ಯರ್ಥಿ ಮತ್ತು ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಬಿ. ಸುದರ್ಶನ್ ರೆಡ್ಡಿ ಅವರ ಕುರಿತ ಇತ್ತೀಚಿನ ಹೇಳಿಕೆಗೆ ಸಂಬಂಧಿಸಿದಂತೆ ಜಂಟಿ ಹೇಳಿಕೆಯನ್ನು ಹೊರಡಿಸಿದೆ.

ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ ರೆಡ್ಡಿ ಅವರು ನಕ್ಸಲ್ ವಾದವನ್ನು ಬೆಂಬಲಿಸುತ್ತಿದ್ದಾರೆಂದು ಕೇಂದ್ರ ಗೃಹ ಅಮಿತ್ ಶಾ ಆಪಾದಿಸಿದ್ದರು. ಸುದರ್ಶನ ರೆಡ್ಡಿ ಅವರು ನಕ್ಸಲ್ ವಿರೋಧಿ ಸಶಸ್ತ್ರ ನಾಗರಿಕ ಸಂಘಟನೆ ಸಲ್ವಾ ಜುಡುಂ ವಿರುದ್ಧ ತೀರ್ಪನ್ನು ನೀಡದೆ ಇರುತ್ತಿದ್ದಲ್ಲಿ ದೇಶದಲ್ಲಿ ತೀವ್ರವಾದಿ ಎಡಪಂಥೀಯ ಚಳವಳಿಯು 2020ನೇ ಇಸವಿಗೆ ಮೊದಲೇ ಕೊನೆಗೊಳ್ಳುತ್ತಿತ್ತು ಎಂದು ಹೇಳಿದ್ದರು.

ನಿವೃತ್ತ ನ್ಯಾಯಾಧೀಶರು ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಸಾಲ್ವಾ ಜುಡುಂ ತೀರ್ಪು ಯಾವುದೇ ರೂಪದಲ್ಲಿ ನಕ್ಸಲ್ ವಾದವನ್ನು ಬೆಂಬಲಿಸುವುದಿಲ್ಲ ಎಂದು ಹೇಳಲಾಗಿದೆ ಮತ್ತು ಅಮಿತ್ ಶಾ ಅವರ ಹೇಳಿಕೆಯನ್ನು ಖಂಡಿಸಲಾಗಿದೆ.

ಹಿರಿಯ ರಾಜಕೀಯ ನಾಯಕರೊಬ್ಬರು ಸುಪ್ರೀಂ ಕೋರ್ಟ್ ತೀರ್ಪನ್ನು ತಪ್ಪಾಗಿ ವ್ಯಾಖ್ಯಾನಿಸುವುದು ನ್ಯಾಯಾಂಗ ಸ್ವಾತಂತ್ರ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಏಳು ಮಂದಿ ಮಾಜಿ ನ್ಯಾಯಾಧೀಶರು, ಮೂವರು ಮಾಜಿ ಹೈಕೋರ್ಟ್ ನ್ಯಾಯಾಧೀಶರು, ಎಂಟು ಹೆಚ್ಚುವರಿ ಹೈಕೋರ್ಟ್ ನ್ಯಾಯಾಧೀಶರು ಮತ್ತು ಇಬ್ಬರು ಕಾನೂನು ತಜ್ಞರು ಜಂಟಿ ಹೇಳಿಕೆಗೆ ಸಹಿ ಹಾಕಿದ್ದಾರೆ. ಅವರಲ್ಲಿ ನ್ಯಾಯಮೂರ್ತಿಗಳಾದ ಎ.ಕೆ. ಪಟ್ನಾಯಕ್, ಗೋಪಾಲಗೌಡ, ಕುರಿಯನ್ ಜೋಸೆಫ್, ಮದನ್ ಬಿ ಲೋಕೂರ್, ಜೆ. ಚೆಲಮೇಶ್ವರ್, ಎಸ್. ಮುರಳೀಧರ್, ಕೆ. ಚಂದ್ರು, ಪ್ರೊ. ಮೋಹನ್ ಗೋಪಾಲ್ ಮತ್ತು ಸಂಜಯ್ ಹೆಗ್ಡೆ ಸೇರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News