×
Ad

ಕೇಂದ್ರ ಬಜೆಟ್ | ಪ್ರಕೃತಿ ವಿಕೋಪಗಳು ಹೆಚ್ಚುತ್ತಿದ್ದರೂ ಭಾರತದ ಹವಾಮಾನ ಹೋರಾಟಕ್ಕೆ ಕನಿಷ್ಠ ಪ್ರೋತ್ಸಾಹ

Update: 2026-02-01 20:40 IST

ಸಾಂದರ್ಭಿಕ ಚಿತ್ರ : PC : PTI

ಹೊಸದಿಲ್ಲಿ, ಫೆ.1: ಹೆಚ್ಚುತ್ತಿರುವ ಉಷ್ಣ ಅಲೆಗಳು, ಪ್ರವಾಹಗಳು, ಚಂಡಮಾರುತಗಳು ಮತ್ತು ವಾಯು ಮಾಲಿನ್ಯ ತುರ್ತು ಪರಿಸ್ಥಿತಿಗಳಿಂದಾಗಿ ಭಾರತವು ತತ್ತರಿಸುತ್ತಿದ್ದರೂ 2026ರ ಕೇಂದ್ರ ಮುಂಗಡಪತ್ರದಲ್ಲಿ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಅನುದಾನವನ್ನು ಸೀಮಿತ ಮಟ್ಟದಲ್ಲಿ ಹೆಚ್ಚಿಸಲಾಗಿದೆ. ಇದು ಹವಾಮಾನ ಬದಲಾವಣೆ ವಿರುದ್ಧದ ಹೋರಾಟ ಅಗತ್ಯವಿರುವ ಗಮನವನ್ನು ಪಡೆದಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

2026–27ರಲ್ಲಿ ಪರಿಸರ ಸಚಿವಾಲಯಕ್ಕೆ 3,759.46 ಕೋಟಿ ರೂ.ಗಳನ್ನು ನಿಗದಿಗೊಳಿಸಲಾಗಿದ್ದು, ಇದು ಹಿಂದಿನ ವರ್ಷದ ಬಜೆಟ್ ಅಂದಾಜು (3,481.61 ಕೋಟಿ ರೂ.)ಗೆ ಹೋಲಿಸಿದರೆ ಸುಮಾರು ಶೇ.8ರಷ್ಟು (278 ಕೋಟಿ ರೂ.) ಹೆಚ್ಚಾಗಿದೆ. ಕಾಗದದ ಮೇಲೆ ಈ ಹೆಚ್ಚಳ ಗಮನಾರ್ಹವೆಂಬಂತೆ ಕಂಡುಬರುತ್ತಿದ್ದರೂ ಭಾರತದ ಹವಾಮಾನ ಮತ್ತು ಪರಿಸರ ಸಮಸ್ಯೆಗಳ ವ್ಯಾಪ್ತಿಯನ್ನು ಪರಿಗಣಿಸಿದರೆ ಒಟ್ಟಾರೆ ಅನುದಾನದ ಮೊತ್ತ ಕಡಿಮೆಯೇ ಇದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಅಂಕಿ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ದೊಡ್ಡ ಬದಲಾವಣೆಗಿಂತ ನಿರಂತರತೆಯೇ ಹೆಚ್ಚಾಗಿ ಕಂಡುಬರುತ್ತದೆ. ಬಂಡವಾಳ ವೆಚ್ಚವು 174.39 ಕೋಟಿ ರೂ.ಗಳಿಂದ 222.80 ಕೋಟಿ ರೂ.ಗಳಿಗೆ ಏರಿಕೆಯಾಗಿದ್ದು, ಇದು ಸಂಶೋಧನಾ ಮೂಲಸೌಕರ್ಯ ಮತ್ತು ಮೇಲ್ವಿಚಾರಣಾ ಸೌಲಭ್ಯಗಳಂತಹ ದೀರ್ಘಕಾಲೀನ ಆಸ್ತಿಗಳಲ್ಲಿ ಕೆಲವು ಹೆಚ್ಚುವರಿ ಹೂಡಿಕೆಗಳನ್ನು ಸೂಚಿಸುತ್ತದೆ.

ಆದಾಯ ವೆಚ್ಚವೂ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇದು ಹೆಚ್ಚಾಗಿ ಅಸ್ತಿತ್ವದಲ್ಲಿರುವ ಸಂಸ್ಥೆಗಳು ಮತ್ತು ಯೋಜನೆಗಳಿಗೆ ಬಳಕೆಯಾಗಲಿದೆ. ಬಜೆಟ್‌ ನ ಬಹುಭಾಗ ನಿಯಂತ್ರಣ ಮತ್ತು ಸಾಂಸ್ಥಿಕ ಸಾಮರ್ಥ್ಯವನ್ನು ಬಲಗೊಳಿಸುವುದರ ಮೇಲೆ ಕೇಂದ್ರೀಕೃತವಾಗಿದೆ. ಬಟಾನಿಕಲ್ ಸರ್ವೆ ಆಫ್ ಇಂಡಿಯಾ, ಝೂವಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಂತಹ (ಎನ್ಜಿಟಿ) ಸಂಯೋಜಿತ ಮತ್ತು ಅಧೀನ ಕಚೇರಿಗಳಿಗೆ ಅನುದಾನವನ್ನು ಹೆಚ್ಚಿಸಲಾಗಿದ್ದು, ಇದು ಪರಿಸರ ಮೇಲ್ವಿಚಾರಣೆ ಮತ್ತು ವಿವಾದ ಪರಿಹಾರಕ್ಕೆ ಸಂಬಂಧಿಸಿದ ಕೆಲಸದ ಹೊರೆ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ.

ದೇಶಾದ್ಯಂತ ಪರಿಸರ ಸಂಬಂಧಿತ ವ್ಯಾಜ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ ಎನ್ಜಿಟಿಗೆ ಅನುದಾನದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಕಾರ್ಯಕ್ರಮ ವೆಚ್ಚದಲ್ಲಿ ಮಾಲಿನ್ಯ ನಿಯಂತ್ರಣದ ಪ್ರಾಬಲ್ಯ ಮುಂದುವರಿದಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿಗಳು ಮತ್ತು ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದ ಬೆಂಬಲಕ್ಕಾಗಿ 2026–27ರಲ್ಲಿ 1,091 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಇದು ಹಿಂದಿನ ಸಾಲಿನ ಪರಿಷ್ಕೃತ ಅಂದಾಜುಗಳಲ್ಲಿ ಒದಗಿಸಲಾಗಿದ್ದ 1,300 ಕೋಟಿ ರೂ.ಗಿಂತ ಕಡಿಮೆಯಾಗಿರುವುದು ಹಲವು ಭಾರತೀಯ ನಗರಗಳಲ್ಲಿ ವಾಯು ಗುಣಮಟ್ಟ ಇನ್ನೂ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಉಳಿದಿರುವಾಗ ವೆಚ್ಚದ ಮೇಲೆ ಬಿಗಿಹಿಡಿತವನ್ನು ಸೂಚಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ಮುಂಗಡಪತ್ರವು ಭಾರತದ ಹವಾಮಾನ ಹೋರಾಟವನ್ನು ಮುಂದುವರಿಸುತ್ತದೆ, ಆದರೆ ಅದಕ್ಕೆ ವೇಗ ನೀಡುವುದಿಲ್ಲ. ಇಂದು ಹವಾಮಾನ ಅಪಾಯಗಳು ಭವಿಷ್ಯದ ಮುನ್ಸೂಚನೆಗಳಾಗಿರದೆ ಜೀವಂತ ವಾಸ್ತವಗಳಾಗಿರುವಾಗ ಇದು ಗಂಭೀರ ಚಿಂತೆಯ ವಿಷಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News