ಕೇಂದ್ರ ಬಜೆಟ್ 2026 | VB-G RAM G ಯೋಜನೆಗೆ 95,692.31 ಕೋಟಿ ರೂ. ಮೀಸಲು
ಮೊತ್ತ ತೀರಾ ಕಡಿಮೆಯಾಗಲಿದೆ ಎಂದು ತಜ್ಞರ ಎಚ್ಚರಿಕೆ
Photo Credit: The Hindu
ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026–27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದು, ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಅಜೀವಿಕ ಯೋಜನೆ (ಗ್ರಾಮೀಣ) (ವಿಬಿ-ಜಿ ರಾಮ್ ಜಿ ಯೋಜನೆ) ಕಾಯ್ದೆ, 2025ರ ಅಡಿ 95,692.31 ಕೋಟಿ ರೂ. ಅನ್ನು ಮೀಸಲಿಡಲಾಗಿದೆ. ಆದರೆ, ಈ ಯೋಜನೆಯಡಿ ನೋಂದಣಿಗೊಂಡಿರುವ ಎಲ್ಲರಿಗೂ 125 ಕೆಲಸದ ದಿನಗಳನ್ನು ಒದಗಿಸುವ ಕೇಂದ್ರ ಸರ್ಕಾರದ ಗುರಿಯನ್ನು ಪೂರೈಸಲು ಸಾಧ್ಯವಾಗುವುದಿಲ್ಲ ಎಂದು ನಿರೀಕ್ಷಿಸಲಾಗಿದೆ. ಈ ಬದ್ಧತೆಯನ್ನು ಪೂರೈಸಲು ಸರ್ಕಾರ 2.30 ಲಕ್ಷ ಕೋಟಿ ರೂ. ಮೀಸಲಿರಿಸಬೇಕಾಗುತ್ತದೆ ಎಂದು ಲೆಕ್ಕಾಚಾರಗಳು ಹೇಳುತ್ತಿವೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಮನರೇಗಾ), 2005ರ ಕಾಯ್ದೆಯ ಬದಲಿಗೆ ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ನೂತನ ಕಾಯ್ದೆಯಡಿ ಕುಶಲರಹಿತ ಮಾನವ ಕೆಲಸಗಳಿಗೆ ನೋಂದಾಯಿಸಿಕೊಳ್ಳಬಹುದಾಗಿದೆ ಹಾಗೂ ಉದ್ಯೋಗವನ್ನು ಬಯಸಬಹುದಾಗಿದೆ. ಈ ಯೋಜನೆಯಡಿ ಅಂದಾಜು 8.65 ಕೋಟಿ ಸಕ್ರಿಯ ಉದ್ಯೋಗ ಕಾರ್ಡ್ ದಾರರಿದ್ದು, ಅವರು ಈ ಯೋಜನೆಯಡಿ ಉದ್ಯೋಗಕ್ಕಾಗಿ ಬೇಡಿಕೆ ಇಡಬಹುದಾಗಿದೆ.
“ಒಂದು ವೇಳೆ ಎಲ್ಲ ಸಕ್ರಿಯ ಉದ್ಯೋಗ ಕಾರ್ಡ್ ದಾರರಿಗೆ 125 ದಿನಗಳ ಉದ್ಯೋಗ ಒದಗಿಸಿದರೆ, ಪ್ರತಿ ವ್ಯಕ್ತಿಗೆ ದಿನವಹಿ 355 ರೂ. ಕೂಲಿಯಂತೆ ಒಟ್ಟು ವಾರ್ಷಿಕ 3,83,844 ಕೋಟಿ ರೂ. ಬೇಕಾಗುತ್ತದೆ. 60:40 ವೆಚ್ಚ ಹಂಚಿಕೆ ಅನುಪಾತದ ಪ್ರಕಾರ, ಕೇಂದ್ರ ಸರ್ಕಾರ ಅಂದಾಜು 2.30 ಲಕ್ಷ ಕೋಟಿ ರೂ. ಪಾಲನ್ನು ನೀಡಬೇಕಾಗುತ್ತದೆ. ಉಳಿದ ಪಾಲನ್ನು ರಾಜ್ಯ ಸರ್ಕಾರಗಳು ಹೊರಬೇಕಾಗುತ್ತದೆ” ಎಂದು ಹೋರಾಟಗಾರರು ಹಾಗೂ ಶಿಕ್ಷಣ ತಜ್ಞರ ಸಂಘಟನೆಯಾದ ಲಿಬ್ ಟೆಕ್ ಇಂಡಿಯಾದ ಹಿರಿಯ ಸಂಶೋಧಕ ಚಕ್ರಧರ್ ಬುದ್ಧ ಹೇಳಿದ್ದಾರೆ.
2026–27ನೇ ಸಾಲಿನ ಬಜೆಟ್ ನಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಲ್ಲದೆ, ಮನರೇಗಾ ಯೋಜನೆಗೂ 30,000 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಹೊಸ ಕಾಯ್ದೆಯ ಅಧಿಸೂಚನೆ ಇನ್ನೂ ಜಾರಿಗೆ ಬಾರದಿರುವುದರಿಂದ, ರಾಜ್ಯ ಸರ್ಕಾರಗಳು ತಮ್ಮ ಆವೃತ್ತಿಯ ಯೋಜನೆಗಳನ್ನು ಜಾರಿಗೊಳಿಸಲು ಇನ್ನೂ ಆರು ತಿಂಗಳ ಕಾಲಾವಕಾಶವಿದೆ. ಈ ಮಧ್ಯದಲ್ಲಿ ಮನರೇಗಾ ಯೋಜನೆ ಮುಂದುವರಿಯಲಿದೆ. ಕಳೆದ ಸಾಲಿನ ಹೊಣೆಗಾರಿಕೆಗಳು ಹಾಗೂ ಸದ್ಯ ಪ್ರಗತಿಯಲ್ಲಿರುವ ವೆಚ್ಚಗಳನ್ನು ನಿಭಾಯಿಸಲು ಈ ಬಜೆಟ್ ಅನುದಾನವನ್ನು ಮೀಸಲಿರಿಸಲಾಗಿದೆ.
ಸೌಜನ್ಯ: thehindu.com