ತುರ್ತು ಪರಿಸ್ಥಿತಿ ಖಂಡಿಸಿ ನಿರ್ಣಯ ಅಂಗೀಕರಿಸಿದ ಕೇಂದ್ರ ಸಚಿವ ಸಂಪುಟ
PC : PTI
ಹೊಸದಿಲ್ಲಿ: ದೇಶದಲ್ಲಿ 50 ವರ್ಷಗಳ ಹಿಂದೆ ಹೇರಲಾದ ತುರ್ತು ಪರಿಸ್ಥಿತಿಯನ್ನು ಖಂಡಿಸುವ ನಿರ್ಣಯವೊಂದನ್ನು ಕೇಂದ್ರ ಸಚಿವ ಸಂಪುಟವು ಬುಧವಾರ ಅಂಗೀಕರಿಸಿತು. ಸಂವಿಧಾನ ಖಾತರಿಪಡಿಸಿದ ಪ್ರಜಾಸತ್ತಾತ್ಮಕ ಹಕ್ಕುಗಳಿಂದ ವಂಚಿತರಾದವರಿಗೆ ಮತ್ತು ‘‘ಊಹಿಸಲೂ ಸಾಧ್ಯವಾಗದ ಭಯಾನಕ ಸನ್ನಿವೇಶಗಳಿಗೆ’’ ಒಳಗಾದವರಿಗೆ ಗೌರವ ಸಲ್ಲಿಸಲು ಎರಡು ನಿಮಿಷಗಳ ಮೌನವನ್ನು ಆಚರಿಸಿತು.
ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ನಿರ್ಣಯವನ್ನು ಓದಿ ಹೇಳಿದ ವಾರ್ತಾ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, ‘‘ತುರ್ತು ಪರಿಸ್ಥಿತಿಯ ಕಾಲದ ದಬ್ಬಾಳಿಕೆಯನ್ನು ಶೌರ್ಯದಿಂದ ಎದುರಿಸಿದ ಮತ್ತು ಅದನ್ನು ಎದುರಿಸುವಲ್ಲಿ ಅಸಾಧಾರಣ ಧೈರ್ಯ ತೋರಿದವರಿಗೆ ಕೇಂದ್ರ ಸಚಿವ ಸಂಪುಟವು ಗೌರವ ಸಲ್ಲಿಸಿದೆ’’ ಎಂದು ಹೇಳಿದರು.
ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಅಂದಿನ ಸರಕಾರವು 1975 ಜೂನ್ 25ರಂದು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿತ್ತು. ಈ ದಿನವನ್ನು ‘‘ಸಂವಿಧಾನ ಹತ್ಯ ದಿವಸ’’ವಾಗಿ ಆಚರಿಸುವುದಾಗಿ ನರೇಂದ್ರ ಮೋದಿ ಸರಕಾರವು ಕಳೆದ ವರ್ಷ ಘೋಷಿಸಿತ್ತು.
ತುರ್ತು ಪರಿಸ್ಥಿತಿ ಮತ್ತು ಭಾರತೀಯ ಸಂವಿಧಾನದ ಆಶಯಗಳನ್ನು ಬಡುಮೇಲುಗೊಳಿಸುವಲ್ಲಿನ ಅದರ ಪ್ರಯತ್ನವನ್ನು ಧೈರ್ಯದಿಂದ ವಿರೋಧಿಸಿದ ಅಸಂಖ್ಯಾತ ವ್ಯಕ್ತಿಗಳ ತ್ಯಾಗಗಳನ್ನು ನೆನಪಿಸಲು ಮತ್ತು ಗೌರವಿಸಲು ಕೇಂದ್ರ ಸಚಿವ ಸಂಪುಟ ನಿರ್ಣಯಿಸಿದೆ.
‘‘2025ರಲ್ಲಿ ಸಂವಿಧಾನ ಹತ್ಯಾ ದಿನಕ್ಕೆ 50 ವರ್ಷ ತುಂಬುತ್ತದೆ. ಇದು ಭಾರತದ ಇತಿಹಾಸದಲ್ಲಿ ಮರೆಯಲಾಗದ ಅಧ್ಯಾಯವಾಗಿದೆ. ಅಂದು ಸಂವಿಧಾನವನ್ನು ಬುಡಮೇಲುಗೊಳಿಸಲಾಯಿತು. ಭಾರತದ ಗಣರಾಜ್ಯ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲೆ ದಾಳಿ ನಡೆಸಲಾಯಿತು. ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಯಿತು ಹಾಗೂ ಮೂಲಭೂತ ಹಕ್ಕುಗಳು, ಮಾನವ ಸ್ವಾತಂತ್ರ್ಯ ಮತ್ತು ಘನತೆಯನ್ನು ಅಮಾನತಿನಲ್ಲಿಡಲಾಯಿತು’’ ಎಂದು ನಿರ್ಣಯ ಹೇಳಿದೆ.