×
Ad

ಕಾರ್ಮಿಕ ಸಂಹಿತೆಗಳ ಏಕಪಕ್ಷೀಯ ಅನುಷ್ಠಾನ:ಯೂನಿಯನ್‌ ಗಳ ಖಂಡನೆ

Update: 2025-11-22 19:47 IST

Photo Credit ; PTI 

ಹೊಸದಿಲ್ಲಿ,ನ.22: ಕೇಂದ್ರ ಸರಕಾರವು ಶುಕ್ರವಾರ ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕೆ ಅಧಿಸೂಚನೆ ಹೊರಡಿಸಿದ್ದು,10 ಕಾರ್ಮಿಕ ಒಕ್ಕೂಟಗಳು ಈ ಸಂಹಿತೆಗಳು ಕಾರ್ಮಿಕ ವಿರೋಧಿ ಮತ್ತು ಉದ್ಯೋಗದಾತರ ಪರವಾಗಿವೆ ಎಂದು ಬಣ್ಣಿಸಿವೆ.

ಹೇಳಿಕೆಯಲ್ಲಿ ನಾಲ್ಕು ಕಾರ್ಮಿಕ ಸಂಹಿತೆಗಳ ಏಕಪಕ್ಷೀಯ ಅನುಷ್ಠಾನವನ್ನು ಖಂಡಿಸಿರುವ ಅವು,ಇದು ದೇಶದಲ್ಲಿಯ ದುಡಿಯುವ ವರ್ಗದ ಜನರಿಗೆ ಕೇಂದ್ರ ಸರಕಾರವು ಮಾಡಿರುವ ವಂಚನೆಯಾಗಿದೆ ಎಂದು ಆರೋಪಿಸಿವೆ.

ಸಂಸತ್ತು 2019ರಲ್ಲಿ ವೇತನ ಸಂಹಿತೆಯನ್ನು ಹಾಗೂ 2020ರಲ್ಲಿ ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತೆ ಸಂಹಿತೆ ಹಾಗೂ ಔದ್ಯೋಗಿಕ ಸುರಕ್ಷತೆ,ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆಗಳನ್ನು ಅಂಗೀಕರಿಸಿತ್ತು.

29 ಕಾರ್ಮಿಕ ಕಾನೂನುಗಳ ಬದಲಿಗೆ ಈ ನಾಲ್ಕು ಸಂಹಿತೆಗಳು ಅನುಷ್ಠಾನಗೊಂಡಿವೆ.

ಕೇಂದ್ರ ಸರಕಾರವು ಗಿಗ್ ಕಾರ್ಮಿಕರಿಗೆ ಅಗತ್ಯ ಆಧಾರಿತ ಕನಿಷ್ಠ ವೇತನ,ಸುರಕ್ಷಿತ ಕೆಲಸದ ಪರಿಸ್ಥಿತಿಗಳು ಮತ್ತು ಸಾರ್ವತ್ರಿಕ ಸಾಮಾಜಿಕ ಭದ್ರತಾ ಹಕ್ಕುಗಳು ಸೇರಿದಂತೆ ಶಾಸನಬದ್ಧ ರಕ್ಷಣೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ಸರಕಾರವು ಹೇಳಿಕೊಂಡಿದೆ.

ಆದರೆ ವಲಸೆ ಕಾರ್ಮಿಕರು,ಸ್ವ ಉದ್ಯೋಗಿ ಕಾರ್ಮಿಕರು, ಮತ್ತು ಮನೆಯಿಂದ ಕೆಲಸ ನಿರ್ವಹಿಸುವ ಕಾರ್ಮಿಕರು ಸೇರಿದಂತೆ ಅನೌಪಚಾರಿ ವಲಯದ ಬಹುಪಾಲು ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆಯನ್ನು ವಿಸ್ತರಿಸಲು ಈ ಸಂಹಿತೆಗಳು ವಿಫಲಗೊಂಡಿವೆ ಎಂದು ಟೀಕಾಕಾರರು ವಾದಿಸಿದ್ದಾರೆ.

2020ರಲ್ಲಿ ಈ ಕಾರ್ಮಿಕ ಸಂಹಿತೆಗಳ ವಿರುದ್ಧ ಕಾರ್ಮಿಕ ಒಕ್ಕೂಟಗಳು ಪ್ರತಿಭಟನೆ ನಡೆಸಿದ್ದವು. ಇವು ಉದ್ಯೋಗದಾತರು ಕಾರ್ಮಿಕರನ್ನು ಸುಲಭವಾಗಿ ನೇಮಿಸಿಕೊಳ್ಳಲು ಮತ್ತು ತೆಗೆದುಹಾಕಲು ಅವಕಾಶ ನೀಡುತ್ತವೆ ಹಾಗೂ ಕಾರ್ಮಿಕರಿಗಾಗಿ ಯಾವುದೇ ಸುರಕ್ಷತಾ ಕ್ರಮಗಳನ್ನು ಹೊಂದಿಲ್ಲ ಎಂದು ಅವು ಆರೋಪಿಸಿದ್ದವು.

ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್,ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್,ಹಿಂದ್ ಮಜ್ದೂರ್ ಸಭಾ,ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಸೇರಿದಂತೆ ಹತ್ತು ಕಾರ್ಮಿಕ ಒಕ್ಕೂಟಗಳು ನಾಲ್ಕು ಕಾರ್ಮಿಕ ಸಂಹಿತೆಗಳ ಏಕಪಕ್ಷೀಯ ಅನುಷ್ಠಾನವನ್ನು ಖಂಡಿಸಿ ಶುಕ್ರವಾರ ಹೇಳಿಕೆಯನ್ನು ಹೊರಡಿಸಿವೆ.

ಕಾರ್ಮಿಕ ಸಂಹಿತೆಗಳ ಕುರಿತು ಹೊರಡಿಸಿರುವು ಅಧಿಸೂಚನೆಯು ನಿರಂಕುಶವಾಗಿದೆ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ತಿಳಿಸಿರುವ ಹೇಳಿಕೆಯು, ಅದು ಎಲ್ಲ ಪ್ರಜಾಪ್ರಭುತ್ವ ನೀತಿಗಳನ್ನು ಧಿಕ್ಕರಿಸಿದೆ ಮತ್ತು ಭಾರತದ ಕಲ್ಯಾಣ ರಾಜ್ಯದ ಸ್ವರೂಪವನ್ನು ನಾಶಗೊಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News