×
Ad

ಉತ್ತರ ಪ್ರದೇಶ| ತಪ್ಪಾದ ಚುಚ್ಚು ಮದ್ದು ನೀಡಿದ ವೈದ್ಯರು; ಬಾಲಕಿ ಮೃತ್ಯು

Update: 2023-09-29 17:23 IST

Screengrab: X/@priyarajputlive

ಲಕ್ನೋ: ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ತಪ್ಪಾದ ಚುಚ್ಚುಮದ್ದನ್ನು ನೀಡಿದ್ದರಿಂದ 17 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಬಳಿಕ ಆಸ್ಪತ್ರೆಯ ಸಿಬ್ಬಂದಿ ಆಕೆಯ ಮೃತದೇಹವನ್ನು ಹೊರಗೆ ನಿಲ್ಲಿಸಿದ್ದ ಮೋಟಾರ್ ಸೈಕಲ್ ಮೇಲೆ ಇಟ್ಟು, ಆಕೆ ಮೃತಪಟ್ಟಿರುವ ಬಗ್ಗೆಯೂ ತಿಳಿಸದೆ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಮೃತ ಬಾಲಕಿಯ ಕುಟುಂಬ ಆರೋಪಿಸಿದೆ.

ಸಾರ್ವಜನಿಕರ ಆಕ್ರೋಶಕ್ಕೆ ಹೆದರಿ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಪಲಾಯನ ಮಾಡಿದ್ದು, ಬಾಲಕಿಯ ಕುಟುಂಬದವರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಬೈಕ್‌ ಮೇಲೆ ಬಾಲಕಿ ನಿರ್ಜೀವವಾಗಿ ಇರುವ ವಿಡಿಯೋವೊಂದು ವೈರಲ್ ಆಗಿದೆ. ಆಸ್ಪತ್ರೆ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಬಾಲಕಿ ಭಾರತಿಗೆ ಮಂಗಳವಾರ ಜ್ವರ ಕಾಣಿಸಿಕೊಂಡಿದ್ದರಿಂದ ಘಿರೋರ್ ಪ್ರದೇಶದ ಕರ್ಹಾಲ್ ರಸ್ತೆಯಲ್ಲಿರುವ ರಾಧಾ ಸ್ವಾಮಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಆಕೆಯ ಚಿಕ್ಕಮ್ಮ ಮನಿಶಾ ಹೇಳಿದ್ದಾರೆ.

ಆಕೆ ಸಂಪೂರ್ಣವಾಗಿ ಚೆನ್ನಾಗಿದ್ದಾರೆ ಎಂದು ವೈದ್ಯರು ಹೇಳಿದ್ದರು. ನಂತರ ವೈದ್ಯರು ಚುಚ್ಚುಮದ್ದನ್ನು ನೀಡಿದರು, ಅದರ ಬಳಿಕ ಆಕೆಯ ಸ್ಥಿತಿ ಹದಗೆಟ್ಟಿತು ಎಂದು ಚಿಕ್ಕಮ್ಮ ಆರೋಪಿಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ಆಸ್ಪತ್ರೆಗೆ ಕಳುಹಿಸಿದ ನೋಡಲ್ ಅಧಿಕಾರಿಯು ಆಸ್ಪತ್ರೆ ತಲುಪಿದಾಗ ಅಲ್ಲಿ ವೈದ್ಯರು ಅಥವಾ ಆಡಳಿತ ಸಿಬ್ಬಂದಿ ಇಲ್ಲದಿರುವುದನ್ನು ಕಂಡು ಆಸ್ಪತ್ರೆಗೆ ಸೀಲ್ ಮಾಡಲು ಆದೇಶಿಸಿದ್ದಾರೆ.

"ಆಸ್ಪತ್ರೆಯಲ್ಲಿ ರೋಗಿಯೊಬ್ಬರು ಇದ್ದರು, ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರನ್ನು ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಆಸ್ಪತ್ರೆಗೆ ಸೀಲ್ ಮಾಡಲಾಗಿದೆ" ಎಂದು ಮುಖ್ಯ ವೈದ್ಯಾಧಿಕಾರಿ ಆರ್‌ಸಿ ಗುಪ್ತಾ ತಿಳಿಸಿದ್ದಾರೆ.

ಆಸ್ಪತ್ರೆಯನ್ನು ನೋಂದಾಯಿಸಲಾಗಿದ್ದರೂ ಆಸ್ಪತ್ರೆ ನಿರ್ವಾಹಕರು ಇರಲಿಲ್ಲ. ಆದ್ದರಿಂದ ಅದರ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದರು.

ಒಂದು ವಾರದೊಳಗೆ ವಿವರವಾದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News