ಉತ್ತರ ಪ್ರದೇಶ| ಕಳ್ಳನೆಂದು ಭಾವಿಸಿ ವ್ಯಕ್ತಿಯನ್ನು ಥಳಿಸಿ ಹತ್ಯೆಗೈದ ಭದ್ರತಾ ಸಿಬ್ಬಂದಿ
ಸಾಂದರ್ಭಿಕ ಚಿತ್ರ
ಶಹಜಹಾನ್‌ಪುರ್: ವ್ಯಕ್ತಿಯೊಬ್ಬನನ್ನು ಕಳ್ಳನೆಂದು ತಪ್ಪಾಗಿ ಭಾವಿಸಿದ ಭದ್ರತಾ ಸಿಬ್ಬಂದಿಗಳು, ಆತನನ್ನು ಥಳಿಸಿ ಹತ್ಯೆಗೈದಿರುವ ಘಟನೆ ಇಲ್ಲಿನ ನಿರ್ಮಾಣ ಹಂತದಲ್ಲಿರುವ ವಸತಿ ಸಮುಚ್ಚಯ ಕಾಲನಿಯಲ್ಲಿ ನಡೆದಿದೆ.
ಈ ಘಟನೆ ಸೋಮವಾರ ರಾತ್ರಿ ತಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಲನಿಯೊಂದರಲ್ಲಿ ನಡೆದಿದ್ದು, ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತ ವ್ಯಕ್ತಿಯ ವಯಸ್ಸು ಸುಮಾರು 40 ವರ್ಷವಿರಬಹುದು ಎಂದು ಅಂದಾಜಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ದ್ವಿವೇದಿ, "ತಡರಾತ್ರಿ ಕಾಲನಿಯಲ್ಲಿ ಮೂವರು ವ್ಯಕ್ತಿಗಳು ಅಡ್ಡಾಡುತ್ತಿದ್ದುದನ್ನು ಭದ್ರತಾ ಸಿಬ್ಬಂದಿಗಳು ಪತ್ತೆ ಹಚ್ಚಿದ್ದಾರೆ. ಭದ್ರತಾ ಸಿಬ್ಬಂದಿಗಳು ಅವರತ್ತ ಧಾವಿಸಿದಾಗ, ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಮತ್ತೊಬ್ಬನನ್ನು ಬೆನ್ನಟ್ಟಿ ಭದ್ರತಾ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ. ಇದಾದ ಬಳಿಕ, ಆ ವ್ಯಕ್ತಿಯ ಕೈ ಮತ್ತು ಕಾಲುಗಳನ್ನು ಭದ್ರತಾ ಸಿಬ್ಬಂದಿಗಳು ಕಟ್ಟಿ ಹಾಕಿದ್ದಾರೆ" ಎಂದು ತಿಳಿಸಿದ್ದಾರೆ.
ಇದರ ಬೆನ್ನಿಗೇ ಸೆರೆ ಸಿಕ್ಕ ವ್ಯಕ್ತಿಯ ಆರೋಗ್ಯ ಕ್ಷೀಣಿಸಿದ್ದು, ಆತನನ್ನು ಭದ್ರತಾ ಸಿಬ್ಬಂದಿಗಳು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆತ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮೃತ ವ್ಯಕ್ತಿಯ ಮೊಣಕೈ ಮೇಲೆ ಉದಯ್ ವಾಲಿ ಎಂದು ಬರೆದಿದ್ದು, ಆತ ಮೃತಪಡುವುದಕ್ಕೂ ಮುನ್ನ, ಆತನನ್ನು ಥಳಿಸಲಾಗಿತ್ತು ಎಂಬುದನ್ನು ಸೂಚಿಸುವಂತೆ ಆತನ ದೇಹದ ಮೇಲೆ ಹಲವು ಗಾಯದ ಗುರುತುಗಳು ಕಂಡು ಬಂದಿವೆ ಎಂದು ಅವರು ಹೇಳಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿರುವ ಪೊಲೀಸರು, ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದಾರೆ.
ಕಳೆದ ವಾರ ರಾಯ್ ಬರೇಲಿಯಲ್ಲಿ ನಡೆದಿದ್ದ ಇಂತಹುದೇ ಘಟನೆಯಲ್ಲಿ 40 ವರ್ಷದ ದಲಿತ ವ್ಯಕ್ತಿಯೊಬ್ಬನನ್ನು ಕಳ್ಳನೆಂದು ತಪ್ಪಾಗಿ ಭಾವಿಸಿ, ಥಳಿಸಿ ಹತ್ಯೆಗೈಯ್ಯಲಾಗಿತ್ತು.