×
Ad

ಮಾಂಸದ ವ್ಯಾಪಾರಿಯನ್ನು ಸುಳ್ಳು ಗೋಹತ್ಯೆ ಪ್ರಕರಣದಲ್ಲಿ ಸಿಲುಕಿಸಲು ʼಗೋರಕ್ಷಕʼನಿಂದ ಸಂಚು!

Update: 2025-03-13 13:54 IST

Photo credit: loksatta.com

ಮೀರತ್: ಮಾಂಸದ ವ್ಯಾಪಾರಿಯೋರ್ವನನ್ನು ಸುಳ್ಳು ಗೋಹತ್ಯೆ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿದ್ದಕ್ಕಾಗಿ ಉತ್ತರಪ್ರದೇಶ ಪೊಲೀಸರು ಸಹರಾನ್ಪುರದಲ್ಲಿ ಗೋರಕ್ಷಕ, ವಿಶ್ವ ಹಿಂದೂ ಪರಿವಾರ ಎಂಬ ಬಲಪಂಥೀಯ ಸಂಘಟನೆಯ ಸಂಸ್ಥಾಪಕನನ್ನು ಬಂಧಿಸಿದ್ದಾರೆ.

ವಿಶ್ ಸಿಂಗ್ ಕಾಂಬೋಜ್(36) ಬಂಧಿತ ಆರೋಪಿ. ಈತ ಟಿಪ್ಪು ಖುರೇಷಿ ಎಂಬ ಮಾಂಸದ ವ್ಯಾಪಾರಿಯಿಂದ 50,000ರೂ. ಹಣವನ್ನು ಪಡೆದು ಆತನ ಜೊತೆ ಈ ಹಿಂದೆ ವ್ಯಾಪಾರದಲ್ಲಿ ಪಾಲುದಾರನಾಗಿದ್ದ ವ್ಯಕ್ತಿಯನ್ನು ಸುಳ್ಳು ಗೋಹತ್ಯೆ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರಸವಾ ಪೊಲೀಸ್ ಠಾಣೆಯ ಎಸ್ಎಚ್ಒ ನರೇಂದರ್ ಶರ್ಮಾ ಈ ಕುರಿತು ಪ್ರತಿಕ್ರಿಯಿಸಿ, ವಿಶ್ ಸಿಂಗ್ ಕಾಂಬೋಜ್ ತನ್ನ ಸಹಚರರೊಂದಿಗೆ ಸೇರಿಕೊಂಡು ಸಹರಾನ್ಪುರದ ಪ್ರಮುಖ ಹೆದ್ದಾರಿಯೊಂದರಲ್ಲಿ ಗೋವಿನ ಅವಶೇಷಗಳನ್ನು ಇರಿಸಿ ಗೋಹತ್ಯೆ ನಡೆಸಿದ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದನು. ಈ ಅವಶೇಷಗಳು ಬಹಳ ದಿನಗಳ ಹಿಂದಿನದು ಎಂದು ನಮಗೆ ಮನವರಿಕೆಯಾಗಿ ಅನುಮಾನ ಬಂದಿತು. ನಂತರ ನಾವು ʼವಿಶ್ವ ಹಿಂದೂ ಪರಿವಾರʼ ಸಂಸ್ಥಾಪಕ ಕಾಂಬೋಜ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆವು. ಈ ವೇಳೆ ಖುರೇಷಿಯ ಸೂಚನೆಯ ಮೇರೆಗೆ ಗೋವಿನ ಅಸ್ಥಿಪಂಜರವನ್ನು ರಸ್ತೆಯಲ್ಲಿರಿಸಿ ಪ್ರತಿಭಟನೆ ನಡೆಸಿರುವುದಾಗಿ ಒಪ್ಪಿಕೊಂಡನು ಎಂದು ಹೇಳಿದರು.

ಖುರೇಷಿ ಮತ್ತು ಆತ ಗುರಿಯಾಗಿಸಿಕೊಂಡ ವ್ಯಕ್ತಿ ಇಬ್ಬರೂ ಮಾಂಸದ ವ್ಯಾಪಾರಿಗಳು. ಆತ ಮಾಂಸದ ವ್ಯವಹಾರದಲ್ಲಿ ಹೆಚ್ಚು ಯಶಸ್ವಿಯಾಗಿದ್ದಾನೆ ಎಂದು ಖುರೇಷಿ, ವಿಶ್ ಸಿಂಗ್ ಕಾಂಬೋಜ್ ಮೂಲಕ ಸಂಚು ರೂಪಿಸಿದನು. ಗೋಹತ್ಯೆ ಪ್ರಕರಣಗಳ ಸೂಕ್ಷ್ಮತೆಯನ್ನು ಗಮನಿಸಿದರೆ, ನ್ಯಾಯಾಲಯಗಳು ಜಾಮೀನು ನೀಡಲು ಕೂಡ ಹಿಂಜರಿಯುತ್ತವೆ. ಖುರೇಷಿ ತನ್ನ ಪ್ರತಿಸ್ಪರ್ಧಿ ವ್ಯಾಪಾರಿಯನ್ನು ಜೈಲಿಗೆ ಕಳುಹಿಸಿ ಅದರ ಲಾಭವನ್ನು ಪಡೆಯಲು ಪ್ರಯತ್ನಿಸಿದನು. ವಿಶ್ ಸಿಂಗ್ ಬಂಧನದ ಬಳಿಕ ಖುರೇಷಿ ಪರಾರಿಯಾಗಿದ್ದಾನೆ. ಆತನ ಬಂಧನದ ನಂತರ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಪೊಲೀಸರು ಹೇಳಿದರು.

ಸಹರಾನ್ಪುರ ಎಸ್ಎಸ್ಪಿ ರೋಹಿತ್ ಸಿಂಗ್ ಸಜ್ವಾನ್ ಈ ಕುರಿತು ಪ್ರತಿಕ್ರಿಯಿಸಿ, ಕಾಂಬೋಜ್ ವಿರುದ್ಧ ಗಲಭೆ ಸೇರಿದಂತೆ ಏಳು ಪ್ರಕರಣಗಳು ಈ ಮೊದಲು ದಾಖಲಾಗಿದೆ. ಇದೀಗ ಶಾಂತಿ ಭಂಗ ಮತ್ತು ಸುಳ್ಳು ಮಾಹಿತಿ ಒದಗಿಸಿದ್ದಕ್ಕಾಗಿ ಬಿಎನ್ಎಸ್ ಸೆಕ್ಷನ್‌ಗಳ ಅಡಿಯಲ್ಲಿ ಆತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News