ಉತ್ತರ ಪ್ರದೇಶ | ಮನೆಯಲ್ಲಿ ವಿವಾಹ ಕಾರ್ಯಕ್ರಮವಿದ್ದ ಕಾರಣ ತಾಯಿಯ ಮೃತದೇಹ ಕೊಂಡೊಯ್ಯಲು ನಿರಾಕರಿಸಿದ ಪುತ್ರ
ಮೃತದೇಹವನ್ನು 4 ದಿನ ಫ್ರೀಝರ್‌ನಲ್ಲಿಡುವಂತೆ ವೃದ್ಧಾಶ್ರಮದ ಸಿಬ್ಬಂದಿಗೆ ಸೂಚಿಸಿದ ಪುತ್ರ
ಸಾಂದರ್ಭಿಕ ಚಿತ್ರ (credit: Grok)
ಲಕ್ನೋ : ಉತ್ತರ ಪ್ರದೇಶದ ಜೌನ್‌ಪುರದಲ್ಲಿ ಮನೆಯಲ್ಲಿ ಮಗನ ವಿವಾಹ ನಡೆಯುತ್ತಿದ್ದ ಕಾರಣ ವ್ಯಕ್ತಿಯೋರ್ವ ವೃದ್ಧಾಶ್ರಮದಿಂದ ತನ್ನ ತಾಯಿಯ ಮೃತದೇಹವನ್ನು ಮನೆಗೆ ಕೊಂಡೊಯ್ಯಲು ನಿರಾಕರಿಸಿರುವ ಘಟನೆ ನಡೆದಿದೆ.
ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದ ಶೋಭಾ ದೇವಿ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾದರು. ಆದರೆ ಆಕೆಯ ಪುತ್ರ ತಾಯಿಯ ಮೃತದೇಹವನ್ನು ಸ್ವೀಕರಿಸಲು ನಿರಾಕರಿಸಿದ್ದಾನೆ. ನಾಲ್ಕು ದಿನಗಳ ಕಾಲ ಫ್ರೀಝರ್‌ನಲ್ಲಿ ಇಡುವಂತೆ ಹೇಳಿದ್ದಾನೆ.
"ನೀವು ತಾಯಿಯ ಮೃತದೇಹವನ್ನು ನಾಲ್ಕು ದಿನ ಫ್ರೀಝರ್‌ನಲ್ಲಿ ಇರಿಸಿ. ಈಗ ಮನೆಯಲ್ಲಿ ಮದುವೆ ಇದೆ. ಮೃತದೇಹವನ್ನು ಈಗ ಮನೆಗೆ ತರುವುದು ಅಶುಭ. ಮದುವೆಯ ನಂತರ ನಾನು ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗುತ್ತೇನೆ" ಎಂದು ವೃದ್ಧಾಶ್ರಮದ ಸಿಬ್ಬಂದಿಗೆ ಆತ ಹೇಳಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದಾಗಿ ವೃದ್ಧಾಶ್ರಮದ ಸಿಬ್ಬಂದಿ ವೃದ್ಧೆಯ ಕುಟುಂಬದ ಇತರ ಸದಸ್ಯರನ್ನು ಸಂಪರ್ಕಿಸಿದರು. ಅವರು ಮೃತದೇಹವನ್ನು ಮನೆಗೆ ತೆಗದುಕೊಂಡು ಹೋದರು. ನಂತರ ಶೋಭಾ ದೇವಿಯ ಮೃತದೇಹವನ್ನು ಸಮಾಧಿ ಮಾಡಿದರು. ನಾಲ್ಕು ದಿನಗಳ ನಂತರ ಮೃತದೇಹ ಹೊರತೆಗೆದು ವಿಧಿ ವಿಧಾನದಂತೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಸಂಬಂಧಿಕರು ಹೇಳಿಕೊಂಡಿದ್ದರು ಎಂದು ಅವರ ಪತಿ ಭುವಾಲ್ ಗುಪ್ತಾ ಹೇಳಿದ್ದಾರೆ.
ಗೋರಖ್‌ಪುರದ ನಿವಾಸಿ ಭುವಾಲ್ ಗುಪ್ತಾ ವೃತ್ತಿಯಲ್ಲಿ ದಿನಸಿ ವ್ಯಾಪಾರಿಯಾಗಿದ್ದರು. ಅವರು ತಮ್ಮ ಪತ್ನಿ ಶೋಭಾ ದೇವಿ ಮತ್ತು ಮೂವರು ಗಂಡು ಮಕ್ಕಳೊಂದಿಗೆ ಕೆಪಿಯರ್‌ಗಂಜ್‌ನ ಭರೋಯಾ ಗ್ರಾಮದಲ್ಲಿ ವಾಸಿಸುತ್ತಿದ್ದರು. ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಅವರೆಲ್ಲರೂ ವಿವಾಹಿತರು. ಒಂದು ವರ್ಷದ ಹಿಂದೆ ಕೌಟುಂಬಿಕ ಕಲಹದಿಂದ ಅವರನ್ನು ಅವರ ಹಿರಿಯ ಪುತ್ರ ಮನೆಯಿಂದ ಹೊರ ಹಾಕಿದ್ದ ಎನ್ನಲಾಗಿದೆ.
ತೀವ್ರ ದುಃಖಿತನಾದ ಭುವಾಲ್ ಗುಪ್ತಾ ಮನೆ ಬಿಟ್ಟು ರಾಜ್‌ಘಾಟ್ ಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ ಅವರನ್ನು ಜನರು ಮನವೊಲಿಸಿ ಅಯೋಧ್ಯೆ ಅಥವಾ ಮಥುರಾದಲ್ಲಿ ಆಶ್ರಯ ಪಡೆಯುವಂತೆ ಸೂಚಿಸಿದ್ದರು, ನಂತರ ಭುವಾಲ್ ಗುಪ್ತಾ ಮತ್ತು ಪತ್ನಿ ಅಯೋಧ್ಯೆಗೆ ತೆರಳಿದರು. ಅಲ್ಲಿ ವಾಸ್ತವ್ಯಕ್ಕೆ ಯಾವುದೇ ವ್ಯವಸ್ಥೆ ಸಿಗದಿದ್ದಾಗ ಮಥುರಾಗೆ ತೆರಳಿದ್ದರು.
ಮಥುರಾದ ಜೌನ್‌ಪುರದಲ್ಲಿರುವ ವೃದ್ಧಾಶ್ರಮದಲ್ಲಿ ಅವರಿಗೆ ವಾಸಕ್ಕೆ ಅವಕಾಶ ದೊರೆತಿತ್ತು. ವೃದ್ಧಾಶ್ರಮದಲ್ಲಿ ಪತ್ನಿಯ ನಿಧನದ ಬಗ್ಗೆ ಭುವಾಲ್ ಗುಪ್ತಾ ತನ್ನ ಕಿರಿಯ ಪುತ್ರನಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಆತ ಅಣ್ಣನಿಗೆ ತಾಯಿಯ ನಿಧನದ ಬಗ್ಗೆ ಮಾಹಿತಿ ನೀಡಿದ್ದಾನೆ. ಆದರೆ ಆತ ಮಗನ ವಿವಾಹವಿರುವ ಕಾರಣ ತಾಯಿಯ ಮೃತದೇಹವನ್ನು ನಾಲ್ಕು ದಿನ ಫ್ರೀಝರ್‌ನಲ್ಲಿ ಇಡುವಂತೆ ಹೇಳಿದ್ದಾನೆ ಎಂದು ವರದಿಯಾಗಿದೆ.