×
Ad

ಯುಪಿಐ ಪಾವತಿ ವಿಫಲ: ಸಮೋಸ ತಿಂದು ವಾಚನ್ನೇ ಕೊಟ್ಟುಹೋದ ರೈಲು ಪ್ರಯಾಣಿಕ!

Update: 2025-10-20 09:15 IST

PC: x.com/htTweets

ಜಬಲ್ಪುರ: ಇಲ್ಲಿನ ರೈಲು ನಿಲ್ದಾಣದ ಮಳಿಗೆಯಲ್ಲಿ 180 ರೂಪಾಯಿ ಮೌಲ್ಯದ ಸಮೋಸಾ ಮತ್ತು ಇತರ ತಿನಸುಗಳನ್ನು ಖರೀದಿಸಿದ ಪ್ರಯಾಣಿಕರೊಬ್ಬರು ಯುಪಿಐ ಮೂಲಕ ಪಾವತಿಸುವ ವ್ಯವಸ್ಥೆ ಕೈಕೊಟ್ಟ ಹಿನ್ನೆಲೆಯಲ್ಲಿ, ರೈಲು ಚಲಿಸಲು ಆರಂಭಿಸಿದಾಗ ಹಣದ ಬದಲು ವಾಚನ್ನೇ ಕೊಟ್ಟು ಪ್ರಯಾಣ ಮುಂದುವರಿಸಿದ ಸ್ವಾರಸ್ಯಕರ ಘಟನೆ ವರದಿಯಾಗಿದೆ.

ಅಕ್ಟೋಬರ್ 17ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಜಬಲ್ಪುರ ನಿಲ್ದಾಣದಲ್ಲಿ ರೈಲು ಅಲ್ಪ ಅವಧಿಗೆ ನಿಂತಿದ್ದ ಸಂದರ್ಭದಲ್ಲಿ ಪ್ರಯಾಣಿಕ ರೈಲಿನಿಂದ ಇಳಿದು ಓಡಿ ಹೋಗಿ ರೈಲು ನಿಲ್ದಾಣದ ತಿಂಡಿ ಮಳಿಗೆಯಿಂದ 180 ರೂಪಾಯಿಯ ತಿನಸುಗಳನ್ನು ಖರೀದಿಸಿದ್ದಾರೆ. ಯುಪಿಐ ವ್ಯವಸ್ಥೆ ಮೂಲಕ ಪಾವತಿ ಮಾಡಲು ಮುಂದಾದಾಗ ವ್ಯವಸ್ಥೆ ಕೈಕೊಟ್ಟಿದೆ. ಈ ಹಂತದಲ್ಲಿ ರೈಲು ಹೊರಟಿದ್ದು, ಆಗ ಅಂಗಡಿ ಮಾಲೀಕ ಹಣಕ್ಕಾಗಿ ಗ್ರಾಹಕನ ಕಾಲರ್ ಹಿಡಿದಿದ್ದಾನೆ. ಖರೀದಿಸಿದ ತಿಂಡಿಗೆ ಬದಲಾಗಿ ನೀಡಲು ನಗದು ಇಲ್ಲದ ಕಾರಣ ಅನಿವಾರ್ಯವಾಗಿ ತನ್ನ ಕೈಯಲ್ಲಿದ್ದ ವಾಚನ್ನೇ ಕೊಟ್ಟು, ಓಡಿ ಹೋಗಿ ಚಲಿಸುತ್ತಿದ್ದ ರೈಲು ಏರಿರುವ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಎಲ್ಲರೂ ನೋಡುತ್ತಿರುವಂತೆಯೇ ಗ್ರಾಹಕನ ವಿರುದ್ಧ ಅಂಗಡಿ ಮಾಲೀಕ ಸಿಟ್ಟಿಗೆದ್ದು, ಹಣಕ್ಕಾಗಿ ಕಾಲರ್ ಹಿಡಿದಿರುವುದು ವಿಡಿಯೊದಲ್ಲಿ ಕಾಣಿಸುತ್ತಿದೆ. ರೈಲು ಇನ್ನೇನು ತಪ್ಪುತ್ತದೆ ಎನ್ನುವಷ್ಟರಲ್ಲಿ ಪ್ರಯಾಣಿಕ ತನ್ನ ಸ್ಮಾರ್ಟ್ವಾಚ್ ಬಿಚ್ಚಿ ಕೊಟ್ಟು ಚಲಿಸಲು ಆರಂಭಿಸಿದ್ದ ರೈಲು ಏರಿದ್ದಾರೆ. ಈ ವಿಡಿಯೊ ತುಣುಕು ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿದ ಬೆನ್ನಲ್ಲೇ ಮಳಿಗೆ ಮಾಲೀಕನ ವಿರುದ್ಧ ರೈಲ್ವೆ ಕಾಯ್ದೆಯ ಸೆಕ್ಷನ್ 145ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಹಿಂದೆಯೂ ಅಂಗಡಿ ಮಾಲೀಕನಿಗೆ ಇಂಥ ನಡತೆ ವಿರುದ್ಧ ಎಚ್ಚರಿಕೆ ನೀಡಲಾಗಿತ್ತು ಎಂದು ರೈಲ್ವೆ ಪೊಲೀಸರು ಹೇಳಿದ್ದಾರೆ.

ರೈಲು ನಿಲ್ದಾಣದ ಐದನೇ ಪ್ಲಾಟ್ಫಾರಂನಲ್ಲಿ ಈ ಘಟನೆ ನಡೆದಿದ್ದು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಪಾವತಿ ವ್ಯವಸ್ಥೆ ವಿಫಲವಾಗಿ ಪ್ರಯಾಣಿಕ ಮುಜುಗರ ಎದುರಿಸಬೇಕಾಯಿತು. ರೈಲು ಹೊರಟಾಗ ರೈಲು ಏರಲು ಓಡುತ್ತಿದ್ದ ಪ್ರಯಾಣಿಕನ ಕಾಲರ್ ಪಟ್ಟಿ ಹಿಡಿದು ನಿಲ್ಲಿಸಿದ ವ್ಯಕ್ತಿ ಕಾಂಚನ್ ರೆಸ್ಟೋರೆಂಟ್ ನ ಸಿಬ್ಬಂದಿ ಎಂದು ಪೊಲೀಸರು ಹೇಳಿದ್ದಾರೆ. ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲಾದ ವಿಡಿಯೊ ಆಧಾರದಲ್ಲಿ ಪೊಲೀಸರು ಕ್ರಮ ಕೈಗೊಂಡು ಆರೋಪಿಯ ವಿಚಾರಣೆ ನಡೆಸಿದ್ದಾರೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News