ಅಮೆರಿಕ ಉದ್ಯಮಿ ನೆವಿಲ್ಲೆ ರಾಯ್ ಸಿಂಘಂ, ‘ನ್ಯೂಸ್ ಕ್ಲಿಕ್’ನ ಇಬ್ಬರು ಮಾಜಿ ಸಿಬ್ಬಂದಿಗೆ ದಿಲ್ಲಿ ಪೊಲೀಸರಿಂದ ಸಮನ್ಸ್

Update: 2024-05-25 15:35 GMT

ನೆವಿಲ್ಲೆ ರಾಯ್ ಸಿಂಘಂ |  PC : X \ @thoughtworks

ಹೊಸದಿಲ್ಲಿ: ‘ನ್ಯೂಸ್‌ಕ್ಲಿಕ್’ನ ವಿರುದ್ಧದ ಭಯೋತ್ಪಾದನ ವಿರೋಧಿ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕದ ಉದ್ಯಮಿ ನೆವಿಲ್ಲೆ ರಾಯ್ ಸಿಂಘಂ ಹಾಗೂ ವೆಬ್‌ಸೈಟ್‌ಗೆ ಲೇಖನಗಳನ್ನು ಬರೆದ ಇಬ್ಬರು ಪತ್ರಕರ್ತರಾದ ಆನಂದ್ ಮಂಗ್ನಾಲೆ ಹಾಗೂ ಪವನ್ ಕುಲಕರ್ಣಿ ಸೇರಿದಂತೆ ಐದು ಮಂದಿಗೆ ದಿಲ್ಲಿ ಪೊಲೀಸ್‌ನ ವಿಶೇಷ ಘಟಕ ಸಮನ್ಸ್ ಜಾರಿ ಮಾಡಿದೆ.

ದಿಲ್ಲಿ ಪೊಲೀಸರು ಸಮನ್ಸ್ ನೀಡಿದ ಇತರರೆಂದರೆ, ಸಿಂಘಂನ ವ್ಯಾಪಾರ ಪಾಲುದಾರ ಜಾಸನ್ ಪೆಚ್ಚರ್ ಹಾಗೂ ಚಿಂತಕರ ಚಿಲುಮೆ ‘ಟ್ರೈಕಾಂಟಿನೆಂಟಲ್’ನ ಕಾರ್ಯಕಾರಿ ನಿರ್ದೇಶಕ ವಿಜಯ್ ಪ್ರಸಾದ್.

‘ನ್ಯೂಸ್ ಕ್ಲಿಕ್’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ ಪ್ರಬೀರ್ ಪುರಕಾಯಸ್ತ ಅವರ ಬಂಧನ ಸಿಂಧುವಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಪುರಕಾಯ್ಥ ಅವರು ದಿಲ್ಲಿಯ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇದಾದ 10 ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.

ನ್ಯೂಸ್ ಕ್ಲಿಕ್‌ನ 40 ಮಂದಿ ಸಿಬ್ಬಂದಿ ಹಾಗೂ ಲೇಖಕರ ನಿವಾಸದ ಮೇಲೆ ದಿಲ್ಲಿ ಪೊಲೀಸರು ದಾಳಿ ಮಾಡಿದ ಬಳಿಕ ಅಕ್ಟೋಬರ್ 3ರಂದು ‘ನ್ಯೂಸ್ ಕ್ಲಿಕ್’ನ ಮಾನವ ಸಂಪನ್ಮೂಲಗಳ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರೊಂದಿಗೆ ಪುರಕಾಯಸ್ಥ ಅವರನ್ನು ಬಂಧಿಸಿದ್ದರು. ಅವರ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದಲ್ಲಿ ಚಕ್ರವರ್ತಿ ಅವರು ಜನವರಿಯಲ್ಲಿ ಮಾಫಿ ಸಾಕ್ಷಿಯಾದರು ಹಾಗೂ ಕ್ಷಮಾದಾನ ಪಡೆದುಕೊಂಡರು. ಮೇ 6ರಂದು ದಿಲ್ಲಿ ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡಿತ್ತು.

ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಚಕ್ರವರ್ತಿ ಅವರು, 2020ರಲ್ಲಿ ನಡೆದ ದಿಲ್ಲಿ ಗಲಭೆಗೆ ಪ್ರಚೋದಿಸಲು ಶರ್ಜೀಲ್ ಇಮಾಮ್ (ಕಾರಾಗೃಹದಲ್ಲಿರುವ ವಿದ್ಯಾರ್ಥಿ ಹೋರಾಟಗಾರ)ಗೆ ಆನಂದ್ ಮಂಗ್ನಾಲೆ ಮೂಲಕ ಪುರಕಾಯ್ಥ ಹಣ ನೀಡಿದ್ದರು ಎಂದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News