×
Ad

ಭಾರತದಿಂದ ಕದ್ದ ನೂರಕ್ಕೂ ಅಧಿಕ ಪುರಾತನ ವಸ್ತುಗಳನ್ನು ಅಮೆರಿಕ ಮರಳಿಸಲಿದೆ: ಪ್ರಧಾನಿ ಮೋದಿ

Update: 2023-06-24 21:14 IST

ನರೇಂದ್ರ ಮೋದಿ | Photo : PTI

ವಾಷಿಂಗ್ಟನ್: ಭಾರತದಿಂದ ಕಳ್ಳತನ ಮಾಡಲಾಗಿದ್ದ ನೂರಕ್ಕೂ ಅಧಿಕ ಪುರಾತನ ವಸ್ತುಗಳು ಮತ್ತು ಕಲಾಕೃತಿಗಳನ್ನು ಮರಳಿಸಲು ಅಮೆರಿಕ ಸರಕಾರವು ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದ್ದಾರೆ.

ಅಮೆರಿಕಕ್ಕೆ ತನ್ನ ಅಧಿಕೃತ ಭೇಟಿಯ ಕೊನೆಯ ದಿನವಾದ ಶುಕ್ರವಾರ ಇಲ್ಲಿಯ ರೊನಾಲ್ಡ್ ರೇಗನ್ ಸೆಂಟರ್ ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಮೋದಿ ಈ ವಿಷಯವನ್ನು ಬಹಿರಂಗಗೊಳಿಸಿದರು. ‘ನಮ್ಮಿಂದ ಕದಿಯಲಾಗಿದ್ದ ನೂರಕ್ಕೂ ಅಧಿಕ ಪುರಾತನ ವಸ್ತುಗಳನ್ನು ಮರಳಿಸಲು ಅಮೆರಿಕ ಸರಕಾರವು ನಿರ್ಧರಿಸಿರುವುದು ನನಗೆ ಸಂತಸವನ್ನುಂಟು ಮಾಡಿದೆ. ಈ ಪುರಾತನ ವಸ್ತುಗಳು ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ತಲುಪಿದ್ದವು. ಅಮೆರಿಕ ಸರಕಾರಕ್ಕೆ ನನ್ನ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ ’ ಎಂದರು.

ಭಾರತೀಯ ಮೂಲದ ಈ ಪುರಾತನ ವಸ್ತುಗಳು ಕಾನೂನುಬದ್ಧವಾಗಿಯೋ ಅಥವಾ ಅಕ್ರಮವಾಗಿಯೋ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ತಲುಪಿದ್ದವು,ಆದರೆ ಅವುಗಳನ್ನು ಭಾರತಕ್ಕೆ ಮರಳಿಸುವ ಅಮೆರಿಕ ಸರಕಾರದ ನಿರ್ಧಾರವು ಉಭಯ ದೇಶಗಳ ನಡುವಿನ ಭಾವನಾತ್ಮಕ ನಂಟನ್ನು ತೋರಿಸುತ್ತಿದೆ ಎಂದು ಮೋದಿ ಹೇಳಿದರು.

ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನವಾಗಿ ಕೇಂದ್ರವು ವಿಶ್ವಾದ್ಯಂತದಿಂದ ಪುರಾತನ ವಸ್ತುಗಳನ್ನು ಮತ್ತು ಕಲಾಕೃತಿಗಳನ್ನು ಸ್ವದೇಶಕ್ಕೆ ಮರಳಿ ತರುತ್ತಿದ್ದು,ಇದಕ್ಕಾಗಿ ಪೂರ್ವಭಾವಿ ವಿಧಾನವೊಂದನ್ನು ಅಳವಡಿಸಿಕೊಂಡಿದೆ. ಶತಮಾನಗಳಿಂದಲೂ ಅಸಂಖ್ಯಾತ ಅಮೂಲ್ಯ ಕಲಾಕೃತಿಗಳನ್ನು ಕದ್ದು ವಿದೇಶಗಳಿಗೆ ಕಳ್ಳಸಾಗಣೆ ಮಾಡಲಾಗಿತ್ತು, ಇವುಗಳಲ್ಲಿ ಕೆಲವು ಆಳವಾದ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿವೆ ಎಂದು ಸರಕಾರವು ಹೇಳಿಕೆಯಲ್ಲಿ ತಿಳಿಸಿದೆ.

ಮೋದಿಯವರು ತನ್ನ ಹಲವಾರು ವಿದೇಶಿ ಭೇಟಿಗಳ ಸಂದರ್ಭ ಈ ಬಗ್ಗೆ ಜಾಗತಿಕ ನಾಯಕರು ಮತ್ತು ಬಹುಪಕ್ಷೀಯ ಸಂಸ್ಥೆಗಳೊಂದಿಗೆ ಚರ್ಚಿಸಿದ್ದು,ಈ ವರೆಗೆ ಒಟ್ಟು 251 ಪುರಾತನ ವಸ್ತುಗಳನ್ನು ಭಾರತಕ್ಕೆ ವಾಪಸ್ ತರಲಾಗಿದೆ. ಈ ಪೈಕಿ 238 ವಸ್ತುಗಳು 2014ರಿಂದೀಚಿಗೆ ಸ್ವದೇಶಕ್ಕೆ ಮರಳಿವೆ ಎಂದೂ ಅದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News