×
Ad

ಉತ್ತರ ಪ್ರದೇಶ | ಶೌಚ ಗುಂಡಿಗೆ ಇಳಿದ ಒಂದೇ ಕುಟುಂಬದ ಮೂವರು ಉಸಿರುಗಟ್ಟಿ ಮೃತ್ಯು

Update: 2025-06-05 20:35 IST

ಸಾಂದರ್ಭಿಕ ಚಿತ್ರ



ಪಿಲಿಬಿಟ್(ಉತ್ತರಪ್ರದೇಶ) : ಇಲ್ಲಿನ ತಮ್ಮ ಮನೆಯ ಹೊರಗೆ ಶೌಚಗುಂಡಿ ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ವಿಷಾನಿಲ ಸೋರಿಕೆಯಾಗಿ ಉಸಿರುಗುಟ್ಟಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಪ್ರಹ್ಲಾದ್ ಮಂಡಲ್ (60), ಅವರ ಪುತ್ರಿ ತನು ವಿಶ್ವಾಸ್ (32) ಹಾಗೂ ಅವರ ಅಳಿಯ ಕಾರ್ತಿಕ್ ವಿಶ್ವಾಸ್ (38) ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮಂಡಲ್ ಅವರು ಇತ್ತೀಚೆಗೆ ಸರಿಸುಮಾರು 8 ಅಡಿ ಆಳದ ಹೊಸ ಶೌಚ ಗುಂಡಿ ನಿರ್ಮಾಣ ಮಾಡಿದ್ದರು. ಹಳೆಯ, ಸಣ್ಣ ಶೌಚ ಗುಂಡಿಯಿಂದ ಹಲವು ಸಮಸ್ಯೆಗಳು ಎದುರಾದ ಹಿನ್ನೆಲೆಯಲ್ಲಿ ಅವರು ಈ ಹೊಸ ಶೌಚ ಗುಂಡಿ ನಿರ್ಮಾಣ ಮಾಡಿದ್ದರು. ಮಂಡಲ್ ತನ್ನ ಪುತ್ರಿ ಹಾಗೂ ಅಳಿಯನೊಂದಿಗೆ ಹೊಸ ಶೌಚ ಗುಂಡಿ ಸ್ವಚ್ಛಗೊಳಿಸಲು ಇಳಿದಿದ್ದರು ಎಂದು ಮಾಧೋಟಂಢಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಅಶೋಕ್ ಪಾಲ್ ತಿಳಿಸಿದ್ದಾರೆ.

‘‘ಸಮೀಪದ ಹಳೆಯ ಶೌಚ ಗುಂಡಿಯಿಂದ ವಿಷಾನಿಲ ಸೋರಿಕೆಯಾದಂತೆ ಕಾಣುತ್ತಿದೆ. ಹೊಸ ಶೌಚ ಗುಂಡಿ ಆಳವಿದ್ದುದರಿಂದ ಮೂವರಿಗೂ ಅದರಿಂದ ಹೊರಗೆ ಬರಲು ಸಾಧ್ಯವಾಗಲಿಲ್ಲ. ಅವರು ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದರು’’ ಎಂದು ಅವರು ತಿಳಿಸಿದ್ದಾರೆ.

ತನು ವಿಶ್ವಾಸ್ ತನ್ನ ಪತಿ ಕಾರ್ತಿಕ್ ಹಾಗೂ ಮಕ್ಕಳೊಂದಿಗೆ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದರು. ಕಾರ್ತಿಕ್ ಸಮೀಪದ ಮೈನಿಗುಲ್ರಿಯಾ ಗ್ರಾಮದ ನಿವಾಸಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದುರಂತ ಸಂಭವಿಸಿದ ಬಳಿಕ ಸಂತ್ರಸ್ತ ಕುಟುಂಬದಿಂದ ಮಾಹಿತಿ ಸಂಗ್ರಹಿಸಲು ಕಾಳಿನಗರ್‌ ನ ತಹಶೀಲ್ದಾರ್ ವಿರೇಂದ್ರ ಕುಮಾರ್ ಅವರು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಅವರ ಆರ್ಥಿಕ ಪರಿಸ್ಥಿತಿ ಆಧಾರದಲ್ಲಿ ಸಾಧ್ಯವಿರುವ ಎಲ್ಲಾ ನೆರವು ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News