ಉತ್ತರ ಪ್ರದೇಶ | ‘‘ಡ್ರೋನ್ ಕಳ್ಳ’’ನೆಂಬ ಶಂಕೆ : ಗುಂಪಿನಿಂದ ಥಳಿಸಿ ವ್ಯಕ್ತಿಯ ಹತ್ಯೆ
ಸಾಂದರ್ಭಿಕ ಚಿತ್ರ
ಲಕ್ನೊ, ಅ. 3: ‘‘ಡ್ರೋನ್ ಕಳ್ಳ’’(ಡ್ರೋನ್ ನೆರವಿನಿಂದ ಕಳ್ಳತನ)ನೆಂದು ಶಂಕಿಸಿ ಫತೇಪುರ-ಕೊಟ್ವಾಲಿಯ 38 ವರ್ಷದ ಹರಿಓಂ ಎಂಬಾತನನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ಉತ್ತರಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದಿದೆ.
ಹರಿಓಂನ ಗಾಯಗೊಂಡ ಅರೆ ನಗ್ನ ಮೃತದೇಹ ಊಂಚಾಹಾರ್ ಕೊಟ್ವಾಲಿ ಪ್ರದೇಶದ ಈಶ್ವರ್ ದಾಸ್ಪುರ ರೈಲು ನಿಲ್ದಾಣದ ಸಮೀಪ ಗುರುವಾರ ಬೆಳಗ್ಗೆ ಪತ್ತೆಯಾಗಿತ್ತು. ವೀಡಿಯೊ ಒಂದು ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆಗೆ ಸಂಬಂಧಿಸಿ 12 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಊಂಚಾಹಾರ್‌ನ ಸಿಒ ಗಿರಿಜಾ ಶಂಕರ್ ತ್ರಿಪಾಠಿ ತಿಳಿಸಿದ್ದಾರೆ.
‘‘ಹರಿಓಂ ಅವರ ಪತ್ನಿ ನೀಡಿದ ದೂರಿನ ಆಧಾರದಲ್ಲಿ ಹಲ್ಲೆಯಲ್ಲಿ ಭಾಗಿಯಾದ 12 ಮಂದಿಯ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿದೆ. ಇವರಲ್ಲಿ 6 ಮಂದಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ’’ ಎಂದು ತ್ರಿಪಾಠಿ ತಿಳಿಸಿದ್ದಾರೆ.
ಅಮ್ರೋಹನ ನಗರದಲ್ಲಿ ಡ್ರೋನ್ ಹಾರಾಡುತ್ತಿರುವುದು ಕಂಡು ಬಂದಿದ್ದರಿಂದ ಉತ್ತರಪ್ರದೇಶದ ಜನರು ಭಯಭೀತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕಳವುಗೈಯುವ ಮುನ್ನ ದರೋಡೆಕೋರರು ಡ್ರೋನ್ ಬಳಸಿ ಮನೆಗಳ ಪರಿಶೀಲನೆ ನಡೆಸುತ್ತಾರೆ ಎಂದು ಕನಿಷ್ಠ 50 ಗ್ರಾಮಗಳ ನಿವಾಸಿಗಳು ನಂಬುತ್ತಾರೆ. ಆದುದರಿಂದ ಜನರು ರಾತ್ರಿ ತಮ್ಮ ಪ್ರದೇಶಗಳಲ್ಲಿ ಗಸ್ತು ನಡೆಸುತ್ತಿದ್ದಾರೆ. ತಮ್ಮ ಮನೆಗಳನ್ನು ಸರದಿಯಂತೆ ಕಾಯುತ್ತಿದ್ದಾರೆ. ಕೆಲವೊಮ್ಮೆ ಇಲ್ಲಿನ ಜನರು ಹಾಗೂ ಅಪರಿಚಿತರು, ಒಳನುಗ್ಗುವವರ ನಡುವೆ ಮುಖಮುಖಿಯಾಗಿದೆ. ಘರ್ಷಣೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಆದರೆ, ದರೋಡೆಕೋರರು ಕಳ್ಳತನಕ್ಕೆ ಡ್ರೋನ್‌ಗಳನ್ನು ಬಳಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ.