×
Ad

ಉತ್ತರಪ್ರದೇಶ: ದಲಿತ ಮಹಿಳೆಯ ಸಾಮೂಹಿಕ ಅತ್ಯಾಚಾರಗೈದು ಭೀಕರ ಹತ್ಯೆ

Update: 2023-11-03 19:54 IST

ಸಾಂದರ್ಭಿಕ ಚಿತ್ರ (PTI)

ಬಂದಾ: ದಲಿತ ಮಹಿಳೆಯೋರ್ವರ ಸಾಮೂಹಿಕ ಅತ್ಯಾಚಾರ ಎಸಗಿದ, ಹತ್ಯೆಗೈದ ಹಾಗೂ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿದ ಭೀಕರ ಘಟನೆ ಉತ್ತರಪ್ರದೇಶದ ಬಂದಾ ಜಿಲ್ಲೆಯ ಪಾಟೌರ ಗ್ರಾಮದಲ್ಲಿ ಈ ವಾರದ ಆರಂಭದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

40 ವರ್ಷದ ದಲಿತ ಮಹಿಳೆ ಹಿಟ್ಟಿನ ಗಿರಣಿ ಸ್ವಚ್ಛಗೊಳಿಸಲು ರಾಜ್‌ಕುಮಾರ್ ಶುಕ್ಲಾ ಅವರ ಮನೆಗೆ ತೆರಳಿದ್ದರು. ಈ ಸಂದರ್ಭ ತನ್ನ ತಾಯಿಯನ್ನು ಕರೆಯಲು ಅವರ 20 ವರ್ಷದ ಮಗಳು ಅಲ್ಲಿಗೆ ತಲುಪಿದಾಗ, ಬಾಗಿಲಿಗೆ ಚಿಲಕ ಹಾಕಲಾದ ಕೊಠಡಿಯ ಒಳಗಡೆಯಿಂದ ತಾಯಿ ಕಿರುಚುತ್ತಿರುವುದನ್ನು ಕೇಳಿದಳು. ಕೊಠಡಿಯ ಬಾಗಿಲು ತೆರೆದಾಗ ತನ್ನ ತಾಯಿ ದೇಹ ಮೂರು ತುಂಡುಗಳಾಗಿ ಬಿದ್ದಿರುವುದನ್ನು ನೋಡಿದಳು ಎಂದು ಗಿರ್ವಾನ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸಂದೀಪ್ ತಿವಾರಿ ಹೇಳಿದ್ದಾರೆ.

ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ರಾಜ್‌ಕುಮಾರ್, ಆತನ ಸಹೋದರರಾದ ಬಾವುವಾ ಶುಕ್ಲಾ ಹಾಗೂ ರಾಮಕೃಷ್ಣ ಶುಕ್ಲಾ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳು ತನ್ನ ತಾಯಿಯನ್ನು ಸಾಮೂಹಿಕ ಅತ್ಯಾಚಾರ ಎಸಗಿ ಭೀಕರವಾಗಿ ಹತ್ಯೆಗೈದಿದ್ದಾರೆ ಎಂದು ಆಕೆ ಹೇಳಿದ್ದಾಳೆ.

ಈ ನಡುವೆ ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಘಟನೆ ಕುರಿತಂತೆ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರು ‘ಎಕ್ಸ್’ನಲ್ಲಿ ಮಾಡಿದ ಹಿಂದಿ ಪೋಸ್ಟ್‌ನಲ್ಲಿ ‘‘ಬಂದಾದ ದಲಿತ ಮಹಿಳೆಯ ಅತ್ಯಾಚಾರ ಹಾಗೂ ಹತ್ಯೆ ಹೃದಯ ವಿದ್ರಾವಕವಾದ ಸುದ್ದಿ. ಉತ್ತರಪ್ರದೇಶದ ಮಹಿಳೆಯರು ಭೀತರಾಗಿದ್ದಾರೆ ಹಾಗೂ ಆಕ್ರೋಶಿತರಾಗಿದ್ದಾರೆ’’ ಎಂದಿದ್ದಾರೆ.

ಐಐಟಿ-ಬಿಎಚ್‌ಯುನಲ್ಲಿ ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿದ ಹಾಗೂ ವೀಡಿಯೊ ದಾಖಲಿಸಿದ ಘಟನೆಯನ್ನು ಕೂಡ ಯಾದವ್ ಅವರು ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News