×
Ad

ಉತ್ತರ ಪ್ರದೇಶ| ಕೂಲರ್ ಪಕ್ಕ ಯಾರು ಕೂರಬೇಕೆಂಬ ವಿಷಯಕ್ಕೆ ಜಗಳ: ವಿವಾಹವನ್ನೇ ರದ್ದುಗೊಳಿಸಿದ ವಧು!

Update: 2024-07-19 16:10 IST

PC : freepressjournal.in

ಬಲ್ಲಿಯ (ಉತ್ತರ ಪ್ರದೇಶ): ಅನಿರೀಕ್ಷಿತ ಕಾರಣಗಳಿಗೆ ವಿವಾಹಗಳು ರದ್ದಾದ ವರದಿಗಳು ಆಗಾಗ ಆಗುತ್ತಲೇ ಇರುತ್ತವೆ. ಆದರೆ, ಕ್ಷುಲ್ಲಕ ಹಾಗೂ ವಿಚಿತ್ರ ಕಾರಣವೊಂದಕ್ಕೆ ನವ ವಧುವೇ ವಿವಾಹವನ್ನು ರದ್ದುಗೊಳಿಸಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಚಿತ್‌ಬರಗಾಂವ್ ಪುರಸಭೆ ಪೊಲೀಸ್ ಠಾಣೆ ವ್ಯಾಪ್ತಿಯ ಮಾಜ್ರಾದಲ್ಲಿ ಇಂತಹ ಅಸಹಜ ಘಟನೆ ನಡೆದಿದ್ದು, ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಆಗಿದ್ದಿಷ್ಟು: ಸಿಕಂದರ್‌ಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಮುಸ್ತಫಾಬಾದ್ ನಿವಾಸಿಯಾದ ವರ ಹುಕುಮ್‌ಚಂದ್ರ ಜೈಸ್ವಾಲ್ ಹಾಗೂ ಅಪೂರ್ವ (ಹೆಸರು ಬದಲಿಸಲಾಗಿದೆ) ಎಂಬ ವಧುವಿನೊಂದಿಗೆ ವಿವಾಹ ನಿಶ್ಚಯವಾಗಿತ್ತು. ಅದ್ದೂರಿಯಾಗಿ ವಿವಾಹ ಸಮಾರಂಭವನ್ನೂ ಆಯೋಜಿಸಲಾಗಿತ್ತು. ಆದರೆ, ವಿವಾಹಕ್ಕೆ ಬಂದಿದ್ದ ಅತಿಥಿಗಳ ನಡುವೆ ಕೂಲರ್ ಪಕ್ಕದ ಆಸನಕ್ಕಾಗಿ ಕಿತ್ತಾಟ ಶುರುವಾಗಿ, ಸಮಸ್ಯೆ ಭುಗಿಲೆದ್ದಿದೆ.

ಈ ಸಂದರ್ಭದಲ್ಲಿ ಪರಸ್ಪರ ವಾಗ್ವಾದ, ಗಲಾಟೆ ತಾರಕಕ್ಕೇರಿದೆ. ವಿವಾಹದ ಮುಹೂರ್ತಕ್ಕಾಗಿ ಕೊಠಡಿಯಲ್ಲಿ ಕಾದು ಕುಳಿತಿದ್ದ ನವ ವಧುವಿಗೆ ಈ ವಿಷಯ ಮುಟ್ಟಿದೆ. ಈ ಕಿತ್ತಾಟದಿಂದ ತೀವ್ರವಾಗಿ ಪ್ರಕ್ಷುಬ್ಧಗೊಂಡಿರುವ ವಧುವು, ಪರಿಸ್ಥಿತಿಯು ಅಶುಭಕರವಾಗಿದೆ ಎಂಬ ಕಾರಣವನ್ನು ನೀಡಿ, ವಿವಾಹವಾಗಲು ನಿರಾಕರಿಸಿದ್ದಾಳೆ. ಈ ಸಂದರ್ಭದಲ್ಲಿ ವರ ಹಾಗೂ ವರನ ಕುಟುಂಬದ ಸದಸ್ಯರು ಆಕೆಯ ಮನವೊಲಿಸಲು ತಮ್ಮೆಲ್ಲ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದರೂ, ವಧು ಮಾತ್ರ ತನ್ನ ಅಚಲ ನಿರ್ಧಾರದಿಂದ ಹಿಂದೆ ಸರಿದಿಲ್ಲ.

ಕೂಲರ್ ಕಾರಣಕ್ಕೆ ಪ್ರಾರಂಭವಾದ ಗಲಾಟೆಯು ಮತ್ತಷ್ಟು ವಿಷಮ ಸ್ಥಿತಿಗೆ ತಿರುಗಿದ್ದರಿಂದ ಆತಂಕಿತರಾದ ಸಂಬಂಧಿಕರು, ಈ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ. ಈ ವಿಷಯದಿಂದ ಪರಿಸ್ಥಿತಿ ಮತ್ತಷ್ಟು ಪ್ರಕ್ಷುಬ್ಧಗೊಳ್ಳುವುದನ್ನು ತಡೆಯಲು ಪೊಲೀಸರು ಮಧ್ಯಪ್ರವೇಶಿಸುವುದು ಅನಿವಾರ್ಯವಾಗಿದೆ.

ಪೊಲೀಸರು ಉಭಯತ್ರಯರೊಂದಿಗೂ ರಾಜಿ ಸಂಧಾನ ನಡೆಸಿದರೂ ಯಾವುದೇ ಪ್ರಯೋಜನವಾಗದೆ ಹೋದುದರಿಂದ, ವಿವಾಹವನ್ನು ರದ್ದುಗೊಳಿಸಲಾಗಿದೆ. ಇದೀಗ ಪೊಲೀಸರು ಸಾರ್ವಜನಿಕ ಶಾಂತಿ ಭಂಗದ ಆರೋಪದ ಮೇರೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 151ರ ಅಡಿ ವಧು-ವರರ ಪೋಷಕರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News