×
Ad

ಡಿಜಿಟಲ್ ಮಾಧ್ಯಮ ನೀತಿ ಪರಿಚಯಿಸಿದ ಉತ್ತರಪ್ರದೇಶ ಸರಕಾರ: ‘ದೇಶ ವಿರೋಧಿ ವಿಷಯ’ಕ್ಕೆ ಜೀವಾವಧಿ ಶಿಕ್ಷೆ

Update: 2024-08-28 22:49 IST

PC : canto.com

ಲಕ್ನೋ: ಆನ್‌ಲೈನ್‌ನಲ್ಲಿ ‘‘ದೇಶ ವಿರೋಧಿ ವಿಷಯ’’ಗಳನ್ನು ಪೋಸ್ಟ್ ಮಾಡುವವರಿಗೆ ಜೀವಾವಧಿ ಶಿಕ್ಷೆ ಸೇರಿದಂತೆ ಕಠಿಣ ಶಿಕ್ಷೆಯನ್ನು ವಿಧಿಸುವ ರಾಜ್ಯ ಡಿಜಿಟಲ್ ಮಾಧ್ಯಮ ನೀತಿ 2024ಕ್ಕೆ ಉತ್ತರಪ್ರದೇಶ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ.

ಪ್ರಧಾನ ಕಾರ್ಯದರ್ಶಿ ಸಂಜಯ್ ಪ್ರಸಾದ್ ಸಹಿ ಮಾಡಿದ ಪತ್ರಿಕಾ ಹೇಳಿಕೆ ಪ್ರಕಾರ, ಡಿಜಿಟಲ್ ಮಾಧ್ಯಮದ ಮೂಲಕ ರಾಜ್ಯದ ಜನರಿಗಿರುವ ಸೌಲಭ್ಯಗಳು ಹಾಗೂ ರಾಜ್ಯದ ವಿವಿಧ ಅಭಿವೃದ್ಧಿಗಳು, ಸಾರ್ವಜನಿಕ ಕಲ್ಯಾಣ/ಫಲಾನುಭವಿ ಯೋಜನೆಗಳು/ಸಾಧನೆಗಳ ಕುರಿತು ಮಾಹಿತಿ ಪ್ರಸಾರ ಮಾಡುವ ಉದ್ದೇಶವನ್ನು ಈ ನೀತಿ ಹೊಂದಿದೆ.

‘‘ದೇಶ ವಿರೋಧಿ ವಿಷಯ’’ಗಳನ್ನು ಪೋಸ್ಟ್ ಮಾಡಿದರೆ ವಿಧಿಸುವ ಶಿಕ್ಷೆಯನ್ನು ಪತ್ರಿಕಾ ಹೇಳಿಕೆ ಉಲ್ಲೇಖಿಸಿಲ್ಲ. ಆದರೆ, ಇಂತಹ ಅಪರಾಧಗಳಿಗೆ ಕನಿಷ್ಠ 3 ವರ್ಷಗಳ ವರೆಗೆ ಜೈಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆ ವರೆಗೆ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

‘ಎಕ್ಸ್’, ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನಲ್ಲಿ ರಾಜ್ಯ ಸರಕಾರದ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಪ್ರಚಾರ ಮಾಡಲು ಸಿದ್ಧರಿರುವ ಪ್ರಭಾವಿಗಳಿಗೆ ಹಣಕಾಸು ಉತ್ತೇಜನ ನೀಡುವುದನ್ನು ಕೂಡ ರಾಜ್ಯದ ನೂತನ ಡಿಜಿಟಲ್ ಮಾಧ್ಯಮ ನೀತಿ 2024 ಪ್ರಸ್ತಾವಿಸಿದೆ.

ದೇಶದ ವಿವಿಧ ಭಾಗಗಳಲ್ಲಿ ಹಾಗೂ ವಿದೇಶಗಳಲ್ಲಿ ವಾಸಿಸುವ ರಾಜ್ಯದ ನಿವಾಸಿಗಳು ಈ ನೀತಿಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಪಡೆಯಲಿದ್ದಾರೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಈಗ ಹಿಂಪಡೆಯಲಾದ ಪ್ರಸಾರ ಮಸೂದೆಯಂತೆ ಈ ನೀತಿ ಕೂಡ ಅಸ್ಪಷ್ಟ ಹಾಗೂ ಸರ್ವಾಧಿಕಾರಿ ಧೋರಣೆಯನ್ನು ಹೊಂದಿದೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News