×
Ad

Goa ನೈಟ್ ಕ್ಲಬ್ ನಲ್ಲಿ ಅಗ್ನಿ ದುರಂತ | ಲೂತ್ರಾ ಸಹೋದರರನ್ನು ಭಾರತಕ್ಕೆ ಯಾವಾಗ ಕರೆತರಬಹುದು? ಪೊಲೀಸರು ಹೇಳಿದ್ದೇನು?

Update: 2025-12-13 07:46 IST

PC | PTI

ಹೊಸದಿಲ್ಲಿ: 25 ಮಂದಿಯ ಸಜೀವ ದಹನಕ್ಕೆ ಕಾರಣವಾಗಿದ್ದ ಬೆಂಕಿ ದುರಂತ ಸಂಭವಿಸಿದ ನೈಟ್‍ ಕ್ಲಬ್ ಮಾಲಕರಾದ ಗೌರವ್ ಲೂತ್ರಾ ಮತ್ತು ಸೌರಭ್ ಲೂತ್ರಾ ದೇಶದಿಂದ ಥೈಲ್ಯಾಂಡ್ ಗೆ ಪಲಾಯನ ಮಾಡಿದ್ದು, ಅವರನ್ನು ಭಾರತಕ್ಕೆ ಗಡೀಪಾರು ಮಾಡುವ ಸಂಬಂಧ ಪ್ರಕ್ರಿಯೆ ನಡೆಯುತ್ತಿದೆ. ಬ್ಯಾಂಕಾಕ್‍ ನಲ್ಲಿರುವ ಭಾರತೀಯ ರಾಜಭಾರ ಕಚೇರಿ ಥೈಲ್ಯಾಂಡ್ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಮುಂದಿನ ವಾರದ ವೇಳೆಗೆ ಗಡೀಪಾರು ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಭಾರತೀಯ ರಾಜಭಾರ ಕಚೇರಿಯ ಮಧ್ಯಪ್ರವೇಶದ ಬಳಿಕ ಫುಕೆಟ್‍ನಲ್ಲಿ ಥೈಲ್ಯಾಂಡ್ ಅಧಿಕಾರಿಗಳು ಲೂತ್ರಾ ಸಹೋದರರನ್ನು ಬಂಧಿಸಿದ್ದರು. ಆದಷ್ಟು ಶೀಘ್ರವಾಗಿ ಅವರನ್ನು ಭಾರತಕ್ಕೆ ಗಡೀಪಾರು ಮಾಡಿಸುವ ಪ್ರಯತ್ನ ಮುಂದುವರಿದಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. ಗೋವಾ ಪೊಲೀಸರು ಕೇಂದ್ರೀಯ ತನಿಖಾ ಸಂಸ್ಥೆಗಳ ಜತೆ ಸಮನ್ವಯದಲ್ಲಿದ್ದು, ಗಡೀಪಾರು ಪ್ರಕ್ರಿಯೆಗಳು ಮುಗಿದು ಮುಂದಿನ ವಾರದ ವೇಳೆಗೆ ಸಹೋದರರನ್ನು ಭಾರತಕ್ಕೆ ಕರೆತರಲು ಸಾಧ್ಯವಾಗಬಹುದು ಎಂದು ಪ್ರಕಟಣೆ ಹೇಳಿದೆ.

ಥೈಲ್ಯಾಂಡ್ ನ ಫುಕೆಟ್‍ನಲ್ಲಿ ಸಹೋದರರನ್ನು ಬಂಧಿಸಿದ ಬಳಿಕ ಗುರುವಾರ ಬ್ಯಾಂಕಾಕ್‍ಗೆ ಕರೆ ತರಲಾಗಿದೆ ಎಂದು ತಿಳಿದು ಬಂದಿದೆ. ನೈಟ್‍ಕ್ಲಬ್ ದುರಂತ ಸಂಭವಿಸುತ್ತಿದ್ದಂತೆಯೇ, ಬಂಧನದ ಭೀತಿಯಿಂದ ಲೂತ್ರಾ ಸಹೋದರರು ಥೈಲ್ಯಾಂಡ್ ನ ಫುಕೆಟ್‍ಗೆ ಪಲಾಯನ ಮಾಡಿದ್ದರು. ಗೋವಾ ಪೊಲೀಸರು ಮತ್ತು ಸಿಬಿಐ ತಂಡ ಲೂತ್ರಾ ಸಹೋದರರನ್ನು ಆದಷ್ಟು ಶೀಘ್ರವಾಗಿ ವಾಪಾಸು ಕರೆ ತರಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

ಸೂಕ್ತ ಮುನ್ನೆಚ್ಚರಿಕೆ ವಹಿಸದೇ ಫೈರ್ ಶೋ ಆಯೋಜಿಸಿದ ಹಿನ್ನೆಲೆಯಲ್ಲಿ ಗೌರವ್ (44) ಮತ್ತು ಸೌರಭ್ (40) ಇದೀಗ ಸಾವಿಗೆ ಕಾರಣವಾದ ಗಾಯ, ನರಹತ್ಯೆ ಮತ್ತು ಹತ್ಯೆಯ ಆರೋಪ ಎದುರಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News